ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ವಿಪತ್ತು ನಿರ್ವಹಣೆಯ ಬಗ್ಗೆ ಜಿಲ್ಲಾ ಪಂಚಾಯತ್ ನ ಮಂಗಳಾ ಸಭಾಂಗಣದಲ್ಲಿ ಕಂದಾಯ ಸಚಿವ ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಮೀನುಗಾರಿಕೆ ಸಚಿವ ಎಸ್ ಅಂಗಾರ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ ಯವರು ಅತಿವೃಷ್ಟಿಯ ಸಂದರ್ಭದಲ್ಲಿ ಕುಸಿತಕ್ಕೆ ಒಳಗಾದ ಮನೆಗಳಿಗೆ ಪರಿಹಾರ ನೀಡುವ ಜೊತೆಗೆ ಕೆಲವು ಪ್ರದೇಶಗಳಲ್ಲಿ ಮನೆಗಳು ಮಳೆಯಿಂದ ತೊಂದರೆಗೆ ಒಳಗಾಗಿ ವಾಸಕ್ಕೆ ಯೋಗ್ಯವಾಗಿರುವುದಿಲ್ಲ. ಅಂತಹ ಮನೆಗಳು ಮೇಲ್ನೋಟಕ್ಕೆ ಸರಿಯಾಗಿದಂತೆ ಕಂಡರೂ ಅಲ್ಲಿ ವಾಸಿಸುವುದು ಅಪಾಯಕ್ಕೆ ಎಡೆ ಮಾಡಿಕೊಟ್ಟಂತೆ ಆಗಿರುತ್ತದೆ. ಅಂತಹ ಮನೆಗಳಿಗೂ ಪರಿಹಾರ ನೀಡುವ ಅಗತ್ಯ ಇದೆ ಎಂದರು.
ಮಳೆಹಾನಿಯಿಂದ ಸಾಕಷ್ಟು ನಷ್ಟ ಅನುಭವಿಸಿದ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಶಾಸಕರು ಸಚಿವರುಗಳಿಗೆ ಮನವಿ ಮಾಡಿದರು.
ಇನ್ನು ಪ್ರತಿ ಬಾರಿ ಕೃತಕ ನೆರೆ ಉದ್ಭವಿಸುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಶಾಶ್ವತ ಪರಿಹಾರ ಮಾಡಬೇಕಾಗಿದೆ. ರಾಜಕಾಲುವೆ, ಚರಂಡಿಗಳ ಹೂಳೆತ್ತುವ, ಮಳೆ ನೀರು ಹೋಗುವ ಚರಂಡಿಗಳ ಸಂಪರ್ಕ ಸಮರ್ಪಕವಾಗಿ ಇರುವಂತೆ ಮತ್ತು ಅತಿಕ್ರಮಣ ಆದ ಕಡೆ ತೆರವು ಕಾರ್ಯ ಅಧಿಕಾರಿಗಳು ಮಾಡಬೇಕಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿಯವರು ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ಜಿಲ್ಲೆಯ ಶಾಸಕರಾದ ಹರೀಶ್ ಪೂಂಜಾ, ರಾಜೇಶ್ ನಾಯಕ್, ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಜಿಲ್ಲಾಡಳಿತದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
07/07/2022 09:22 pm