ಮುಲ್ಕಿ:ಕಿಲ್ಪಾಡಿ ಗ್ರಾಪಂ ವತಿಯಿಂದ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು
ಕೊರಗ ಸಮುದಾಯದ ಯುವಕರು ಡಿಗ್ರಿ ಮುಗಿಸಿ 2.3 ವರ್ಷ ಕಳೆದರೂ ಸೂಕ್ತ ಉದ್ಯೋಗ ದೊರಕುತ್ತಿಲ್ಲ ಎಂದು ಕೆಲವರು ಹಲವು ಬಾರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖಾಧಿಕಾರಿ ಶುಭಾ ನಾಯಕ್ ರವರಿಗೆ ಸಭೆಯಲ್ಲಿ ದೂರು ನೀಡಿದರು.
ಕೋವಿಡ್ ಹಾವಳಿ ಬಳಿಕ ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಕೊರಗ ಜನಾಂಗದ ಯಾವುದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಯಾಗಿಲ್ಲ ನಿವಾಸಿಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಇದ್ದು, ಇಲಾಖೆಗೇ ತೆರಳಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಶುಭಾ ನಾಯಕ್ ಮಾತನಾಡಿ, ಈ ಬಗ್ಗೆ ತಕ್ಷಣ ಗಮನ ಹರಿಸಿ ಉದ್ಯೋಗ,ವಿದ್ಯಾರ್ಥಿ ವೇತನ ದೊರಕಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಇದೇ ರೀತಿ ಕೆಲವರಿಗೆ ಐಟಿಡಿಪಿ ಆಹಾರಗಳೂ ಸೂಕ್ತ ಸಮಯದಲ್ಲಿ ದೊರಕುತ್ತಿಲ್ಲ ಎಂದು ಕೆಲವರು ದೂರು ನೀಡಿದರು. ಈ ಕಾಲನಿಯಲ್ಲಿ ಶಾಲೆಗೆ ತೆರಳದೆ ಮನೆಯಲ್ಲೇ ಉಳಿದಿರುವ ಬಗ್ಗೆ ಇಲಾಖಾ ಗಮನ ಸೆಳೆಯಲಾಯಿತು.ಎಷ್ಟೇ ಸಮಜಾಯಿಸಿದರೂ ಅಂಥವರು ಶಾಲೆಗೆ ಬರಲು ಒಪ್ಪುತ್ತಿಲ್ಲ ಎಂಬ ಮಾಹಿತಿ ನೀಡಲಾಯಿತು.
ಆರೋಗ್ಯ ಇಲಾಖೆಯ ಶೆರ್ಲಿನ್ ಆರೋಗ್ಯ ಮಾಹಿತಿ ನೀಡಿದರು. ಗ್ರಾಮ ಕರಣಿಕ ಜ್ಞಾನೇಶ್ವರೀ ಇಲಾಖಾ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಜಲಜಾ ಇಲಾಖಾ ಮಾಹಿತಿ ನೀಡಿದರು. ರೋಜ್‌ಗಾರ್ ಬಗ್ಗೆ ತಾಪಂ ಇಲಾಖಾಧಿಕಾರಿ ನಿಶ್ಮಿತಾ ಮಾಹಿತಿ ನೀಡಿ ಉದ್ಯೋಗ ಖಾತರಿ ಯೋಜನೆಗೆ ಎಲ್ಲರೂ ನೊಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಗ್ರಾ.ಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ, ಗ್ರಾಮದ ಕೊರಗ ಕಾಲನಿಯ ಎಲ್ಲಾ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ನೀಗಿಸಲಾಗಿದೆ. ಮುಂದೆಯೂ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಸೂಕ್ತವಾಗಿ ಸ್ಪಂದಿಸಲಾಗುವುದು. ಈ ಭಾಗದಲ್ಲಿ ಕಂಡುಬಂದಿರುವ ಹುಚ್ಚು ನಾಯಿ ಕಡಿತದ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ ನಾಯಿಗಳಿಗೆ ಇಂಜೆಕ್ಷನ್ ನೀಡಲು ಮುಂದಿನ ವಾರ ಇದೇ ಕಾಲನಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿದರು. ಸುರೇಶ್ ಕೊಲಕಾಡಿ ವಂದಿಸಿದರು.
Kshetra Samachara
24/06/2022 07:20 pm