ಮುಲ್ಕಿ:ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಸುರಿಯುತ್ತಿದ್ದು, ಇನ್ನೂ ನಾಲ್ಕು ದಿನ ಅವ್ಯಾಹತ ಮಳೆ ಬರುವ ಸಾಧ್ಯತೆ ಇರುವುದರಿಂದ ನೆರೆ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು, ಬೋಟ್ ಗಳನ್ನು ಪರಿಶೀಲಿಸಿ ಸುಸ್ಥಿತಿಯಲ್ಲಿಡಲು ಆದೇಶ ನೀಡಲಾಯಿತು.
ನೆರೆ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಲ್ಲಿ ಮುಂದೆ ಉಂಟಾಗುವ ಆಸ್ತಿ ಪಾಸ್ತಿ ಹಾನಿಗಳನ್ನು ಕಡಿತಗೊಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಘಟಕದ ವತಿಯಿಂದ ಮಳೆಗಾಲದ ಪೂರ್ವಸಿದ್ಧತಾ ಸಭೆ ನಡೆಸಿ ಗೃಹರಕ್ಷಕರಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಲಾಯಿತು.
ಅವರಿಗೆ ಬೇಕಾದ ಲೈಫ್ ಬಾಯ್, ಲೈಫ್ ಜಾಕೆಟ್, ರೈನ್ ಬೂಟ್ ಗಳನ್ನು ಒದಗಿಸಲಾಯಿತು ಹಾಗೂ ನೆರೆ ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲು ನಿಪುನ ಈಜುಗಾರರನ್ನು ಗುರುತಿಸಿ ರಕ್ಷಣಾ ತಂಡವನ್ನು ರಚಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಮೂಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್ ಅವರಿಗೆ ಆದೇಶ ನೀಡಿದರು.
ತಜ್ಞ ಈಜುಗಾರರಾದ ಸೈಯ್ಯದ್, ನಾಸಿರ್ ಹಾಗೂ ಅಬ್ದುಲ್ ಅಜಿಜ್ ಅವರಿಗೆ ರಕ್ಷಣಾ ತಂಡದ ಉಸ್ತುವಾರಿಯನ್ನು ನೀಡಿದರು. ಮೂಲ್ಕಿ ವಲಯದ ಕಂದಾಯ ನೀರಿಕ್ಷಕರಾದ ಜಿ.ಎಸ್.ದಿನೇಶ್ ರವರು ಈ ಸಂದರ್ಭದಲ್ಲಿ ಮಾತನಾಡಿ ಗೃಹರಕ್ಷಕರಿಗೆ ಬೇಕಾದ ಎಲ್ಲಾ ಪರಿಕರಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು ಮತ್ತು ಸದಾ ಕಾಲ ಎಚ್ಚರದಿಂದ ಇರಲು ಸೂಚಿಸಿದರು. ಮೂಲ್ಕಿ ಘಟಕದ ಸುಮಾರು 35 ಮಂದಿ ಗೃಹರಕ್ಷಕರು ಈ ಸಭೆಯಲ್ಲಿ ಭಾಗವಹಿಸಿದರು.
Kshetra Samachara
20/05/2022 09:54 pm