ಮುಲ್ಕಿ:ಕಿಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ 2022 23 ನೇ ಸಾಲಿನ ಗ್ರಾಮ ಸಭೆ ಗ್ರಾ ಪಂ ಸಭಾಭವನದಲ್ಲಿ ಅಧ್ಯಕ್ಷೆ ಲೀಲಾವತಿ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರು ಗೈರು ಹಾಜರಾಗಿದ್ದರು. ಪಂಚಾಯತ್ ವ್ಯಾಪ್ತಿಯ ಕುಮಾರಮಂಗಿಲ ಬಳಿ ಜಲಜೀವನ್ ಮಿಷಿನ್ ಕಾಮಗಾರಿ ವೇಳೆ ರಸ್ತೆಯಲ್ಲಿ ಮಣ್ಣು ಹಾಕಿದ್ದು ಸಂಚರಿಸಲು ತೀವ್ರ ತೊಂದರೆಯಾಗಿದೆ ಸರಿಪಡಿಸಿ ಎಂದು ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ ಇಂಜಿನಿಯರ್ ಪ್ರಶಾಂತ್ ಆಳ್ವ ಗೆ ಸೂಚನೆ ನೀಡಿದರು.
ಅಂಗನವಾಡಿ ಮಕ್ಕಳಿಗೆ ಕ್ಷೀರಭಾಗ್ಯದ ಹಾಲು ಸೇವಿಸಿದ ಮಗುವಿಗೆ ಕೂಡಲೇ ಜ್ವರ ಬರುತ್ತದೆ, ಬೇಡ ಎಂದರೂ ಹಾಲು ಸೇವಿಸಲು ಒತ್ತಾಯಿಸುತ್ತಾರೆ ಎಂದು ಕೆರೆಕಾಡಿನ ಕೃಷ್ಣಯ್ಯ ಆಚಾರ್ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ಸ್ಪಷ್ಟನೆ ನೀಡಲು ಒತ್ತಾಯಿಸಿದರು.
ಗರ್ಭಿಣಿ ಮಹಿಳೆಯರು ಸರಕಾರದ ಮಾತೃಪೂರ್ಣ ಯೋಜನೆಗೆ ಅಂಗನವಾಡಿಗೆ ಬರಲು ಅಸಹಾಯಕ ಸ್ಥಿತಿ ಇದ್ದು ನಿಯಮಗಳನ್ನು ಸಡಿಲಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಪಂಚಾಯತ್ ವ್ಯಾಪ್ತಿಯ ಕುಬೆವೂರು ಜಾರಂದಾಯ ದೈವಸ್ಥಾನ ದ್ವಾರದ ಬಳಿಯ ಪ್ರಮುಖ ರಸ್ತೆ ಹೊಂಡಮಯ ವಾಗಿದ್ದು ಅಳವಡಿಸಿದ ಮೋರಿ ಕಾಮಗಾರಿ ಕಳಪೆಯಾಗಿದ್ದು ಕೃತಕ ನೆರೆ ಭೀತಿ ಉಂಟಾಗಿದೆ ಎಂದು ಗ್ರಾಮಸ್ಥ ಪುನೀತ್ ಕೃಷ್ಣ ದೂರಿದರು.
ಪಂಚಾಯತ್ ವ್ಯಾಪ್ತಿಯ ಮನೆ ಮನೆ ತ್ಯಾಜ್ಯ ಸಂಗ್ರಹ ಸ್ಥಗಿತಗೊಂಡಿದ್ದು ಪುನರಾರಂಭಿಸಲು ಗ್ರಾಮಸ್ಥ ಜಗನ್ನಾಥ ಕರ್ಕೇರ ಒತ್ತಾಯಿಸಿದರು. ಇದಕ್ಕೆ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ ಉತ್ತರಿಸಿ ತ್ಯಾಜ್ಯ ವಿಲೇವಾರಿಗೆ ಪಂಚಾಯತಿಯಲ್ಲಿ ಸ್ಥಳವಿಲ್ಲ ಈ ಬಗ್ಗೆ ಪಕ್ಕದ ಕೆಮ್ರಾಲ್ ಗ್ರಾಪಂ ಜೊತೆ ಮಾತುಕತೆ ನಡೆಸಿದ್ದು ಮುಂದಿನ ದಿನಗಳಲ್ಲಿ ಪಂಚಾಯತಿಗೆ ಸೂಕ್ತ ಕಟ್ಟಡ ಹಾಗೂ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಬಿಸಾಡುವವರ ಬಗ್ಗೆ ಪಂಚಾಯಿತಿಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದುಎಂದರು
ನೋಡಲ್ ಅಧಿಕಾರಿಯಾಗಿ ಮಂಗಳೂರು ಅಕ್ಷರದಾಸೋಹ ಅಧಿಕಾರಿ ರಾಜೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.
Kshetra Samachara
20/06/2022 01:07 pm