ಮುಲ್ಕಿ: ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದಂತೆ ಬುಧವಾರದಿಂದ ಕಾಲೇಜುಗಳು ಆರಂಭಗೊಂಡಿದ್ದು ಮುಲ್ಕಿ ಪರಿಸರದ ಕಿನ್ನಿಗೋಳಿ ಮತ್ತು ಹಳೆಯಂಗಡಿ ಕಾಲೇಜಿನಲ್ಲಿ ವಿವಾದ ಭುಗಿಲೆದ್ದಿದೆ.
ಮುಲ್ಕಿ ತಾಲೂಕು ವ್ಯಾಪ್ತಿಯ ಹಳೆಯಂಗಡಿಯ ಇಂದಿರಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 15 ವಿದ್ಯಾರ್ಥಿನಿಯರು ಮತ್ತು ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜಿನಲ್ಲಿ 23 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದು ಕಾಲೇಜಿನ ಪ್ರಾಚಾರ್ಯರು ಹಿಜಾಬ್ ತೆಗೆದು ತರಗತಿಗೆ ಹೋಗಲು ಸೂಚಿಸಿದ್ದು ವಿದ್ಯಾರ್ಥಿನಿಯರು ಒಪ್ಪದ ಕಾರಣ ಮಾತಿನ ಚಕಮಕಿ ನಡೆದಿದೆ
ಈ ಸಂದರ್ಭ ಮುಲ್ಕಿ ಪೊಲೀಸರ ಮದ್ಯಸ್ಥಿಕೆಯಿಂದ ವಿದ್ಯಾರ್ಥಿನಿಯರು ಮನೆಗೆ ಹೋಗಿದ್ದಾರೆ.
ಮಕ್ಕಳ ಹೆತ್ತವರು ಮಾಧ್ಯಮದೊಂದಿಗೆ ಮಾತನಾಡಿ ತಮ್ಮ ಮಕ್ಕಳು ಹಿಂದಿನಿಂದಲೂ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದು ಪ್ರವೇಶ ನಿರಾಕರಿಸಿರುವುದು ಸರಿಯಲ್ಲ .ಕಾಲೇಜಿನಲ್ಲಿ ಡ್ರೆಸ್ ರೂಮ್ ವ್ಯವಸ್ಥೆ ಸರಿಯಿಲ್ಲ.ಸಚಿವರು ಕಾಲೇಜಿಗೆ ಸಮವಸ್ತ್ರ ನಿಯಮವಿಲ್ಲವೆಂದು ತಿಳಿಸಿದ್ದಾರೆ, ಗುರುವಾರದಂದು ಮಕ್ಕಳನ್ನು ಕಾಲೇಜಿನ ತರಗತಿಗೆ ಪ್ರವೇಶ ನಿಷೇಧಿಸಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದು ಬಿಗಿ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿದೆ.
Kshetra Samachara
16/02/2022 09:07 pm