ಮಂಗಳೂರು: ಅವೈಜ್ಞಾನಿಕ ವೃತ್ತ ನಿರ್ಮಿಸಿ ಕೃತಕ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಂದೊಡ್ಡಿರುವ ಕ್ರಮವನ್ನು ವಿರೋಧಿಸಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದಾದ್ಯಂತ ಅವ್ಯವಸ್ಥೆ ಸೃಷ್ಟಿಸಿರುವ ಮನಪಾ ಆಡಳಿತದ ವಿರುದ್ಧ ಇಂದು ನಗರದ ಹ್ಯಾಮಿಲ್ಟನ್ ಸರ್ಕಲ್ ನಲ್ಲಿ ಡಿವೈಎಫ್ಐ, ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ಧೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಿಂದ ಮಂಗಳೂರಿನ ಟ್ರಾಫಿಕ್ ಸಮಸ್ಯೆಗಳು , ಡ್ರೈನೇಜ್ ಸಮಸ್ಯೆಗಳು ಅಂತ್ಯವಾಗುವ ನಿರೀಕ್ಷೆಯಿತ್ತು. ಆದರೆ ಇದೀಗ ಜನತೆಯ ನಿರೀಕ್ಷೆಗಳು ಹುಸಿಗೊಂಡಿವೆ. ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯಿಂದ ನಗರದಲ್ಲಿ ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದೆ. ಬಂದರು ಪ್ರವೇಶಿಸುವ ರಸ್ತೆಗಳನ್ನು ವೃತ್ತ ನಿರ್ಮಾಣದ ಹೆಸರಿನಲ್ಲಿ ಕಿರಿದುಗೊಳಿಸಲಾಗುತ್ತಿದೆ. ಇದರಿಂದ ಬಂದರುಗಳಿಗೆ ತೆರಳುವ ಗೂಡ್ಸ್ ಲಾರಿಗಳಿಗೂ ಸಮಸ್ಯೆಗಳಾಗುತ್ತಿದೆ. ಶಾಸಕ ವೇದವ್ಯಾಸ ಕಾಮತ್ ಅವರ ಕಮಿಷನ್ ಆಸೆಗೆ ಮಂಗಳೂರು ನಗರವು ಬಲಿಯಾಗುತ್ತಿದೆ ಎಂದು ಹೇಳಿದರು.
ಸಿಪಿಐಎಂ ದ.ಕ.ಜಿಲ್ಲಾ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಅವೈಜ್ಞಾನಿಕ ವೃತ್ತ ನಿರ್ಮಾಣದಿಂದ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿದೆ. ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನೂ ಕೂಡ ಅಭಿವೃದ್ಧಿಯ ಹೆಸರಿನಲ್ಲಿ ಕೆಡವಿ ಹಾಕಲಾಗುತ್ತಿದೆ. ಈಗಾಗಲೇ ನಿರ್ಮಾಣ ಮಾಡಿ ವರುಷಗಳೇ ಆಗಿರದ ಡಿವೈಡರ್ ಗಳನ್ನು, ವೃತ್ತಗಳನ್ನು ಅಗೆದು ಹಾಕಿ ನಗರವನ್ನು ವಿಕೃತಗೊಳಿಸಲಾಗುತ್ತಿದೆ ಎಂದು ಹೇಳಿದರು.
Kshetra Samachara
09/06/2022 06:17 pm