ಕಾರ್ಕಳ: 'ಪ್ರತಿ ಗ್ರಾಪಂಗಳಲ್ಲಿ ಮಣ್ಣು ಪರೀಕ್ಷೆ ಘಟಕ ಆರಂಭಿಸುವ ಯೋಜನೆ ರಾಜ್ಯ ಸರಕಾರದ ಮುಂದಿದ್ದು, ಯೋಜನೆಯ ಪ್ರಸ್ತಾವನೆ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಕೃಷಿ ಸಂಜೀವಿನಿ ಮೂಲಕ ರೈತರ ಹೊಲಕ್ಕೆ ಭೇಟಿ ನೀಡಿ ಸಂಕಷ್ಟ ನಿವಾರಣೆಗೆ ಮಾರ್ಗದರ್ಶನ ನೀಡಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 40 ವಾಹನಗಳನ್ನು 20 ರೈತ ಕೇಂದ್ರಕ್ಕೆ ನೀಡಲಾಗಿದೆ.
ಮುಂದಿನ ವರ್ಷಗಳಲ್ಲಿ ಈ ಯೋಜನೆ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು' ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಕುಕ್ಕುಂದೂರು ಗ್ರಾಪಂ ಮೈದಾನದಲ್ಲಿ ಇಂದು ಕಾರ್ಲ ಕಜೆ ಮುದ್ರಾಂಕ ಬಿಡುಗಡೆ ಹಾಗೂ ರೈತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. "ಕಾರ್ಲ ಕಜೆ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತು ರೈತರ ಬ್ರಾಂಡ್ ಬಿಡುಗಡೆಗೆ ಶಾಸಕ ವಿ.ಸುನಿಲ್ ಕುಮಾರ್ ಕಾರಣರಾಗಿದ್ದಾರೆ. ಕೃಷಿ ಸಚಿವನಾಗಿ ರಿಬ್ಬನ್ ಕತ್ತರಿಸಲು, ಗುದ್ದಲಿ ಪೂಜೆಗೆ ಸೀಮಿತನಾಗಿದ್ದ ನಾನು, ಇದೇ ಮೊದಲ ಬಾರಿಗೆ ಉತ್ಪಾದನೆ ಬ್ರಾಂಡ್‌ವೊಂದನ್ನು ಲೋಕಾರ್ಪಣೆ ಮಾಡುತ್ತಿರುವುದು ಸಚಿವ ಸ್ಥಾನದಲ್ಲಿ ನನಗೆ ಖುಷಿ ತಂದಿದೆ.
ಕಾರ್ಲ ಕಜೆ ಕುರಿತು ಡಿಎನ್‌ಎ ಪರೀಕ್ಷೆ, ಸಂಶೋಧನೆ ನಡೆಸಿ ಪ್ರಮಾಣ ಪತ್ರ ಶೀಘ್ರ ದೊರಕಿಸುವಲ್ಲಿ ಇಲಾಖಾಧಿಕಾರಿಗಳು ಮುಂದಾಗಬೇಕು ಎಂದರು.
"ಸ್ವಾಭಿಮಾನ ರೈತ ಕಾರ್ಡನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿದ್ದು, 70 ಲಕ್ಷ ರೈತರು ಈ ಕಾರ್ಡ್ ಫಲಾನುಭವಿಗಳಾಗಲಿದ್ದಾರೆ. ಅದರಲ್ಲಿ ರೈತರ ಎಲ್ಲ ಮಾಹಿತಿ ಅಡಕವಾಗಿದೆ. ಇದರಿಂದ ಆರ್.ಟಿ.ಸಿ. ಇತರ ದಾಖಲೆ ಪತ್ರಗಳನ್ನು ಹಿಡಿದುಕೊಂಡು ಕಚೇರಿಗೆ ಅಲೆದಾಡುವ ಕಷ್ಟ ಎದುರಾಗುವುದಿಲ್ಲ. ಆ ಕಾರ್ಡ್ ರೈತರಿಗೆ ಲಭ್ಯವಾದಾಗ ಸ್ವಾಭಿಮಾನಿ ರೈತ ಎಂದು ಎದೆ ತಟ್ಟಿ ಹೇಳಿಕೊಳ್ಳಬಹುದು" ಎಂದರು.
ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, "ರೈತರು ಬೆಳೆಸುವ ಬೆಳೆಗೆ ಮುದ್ರಾಂಕ ದೊರೆತಾಗ ಸರಕಾರದ ಮಾನ್ಯತೆಯಿಂದ ಕೃಷಿಕರಿಗೆ ಹೆಚ್ಚಿನ ರೀತಿಯಲ್ಲಿ ಪ್ರಯೋಜನವಾಗುವ ಮೂಲಕ ಆ ಉತ್ಪನ್ನ ಹೆಚ್ಚು ಪ್ರಸಿದ್ಧಿ ಹೊಂದುವ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ದೊರಕಲು ಸಾಧ್ಯ ಎಂದರು. ಕಾರ್ಲ ಕಜೆ ಇದೀಗ 5000 ಕ್ವಿಂಟಾಲ್ ಉತ್ಪಾದನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕುವುದರಿಂದ ಉತ್ಪಾದನೆ ಹೆಚ್ಚಳವಾಗಲಿದೆ" ಎಂದರು.
ಗೇರುಬೀಜ ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕರಾವಳಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ತಾಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷ ಹರೀಶ್ ನಾಯಕ್, ಹೆಬ್ರಿ ತಾಪಂ ಅಧ್ಯಕ್ಷ ರಮೇಶ್ ಪೂಜಾರಿ, ಪುರಸಭೆ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಪಲ್ಲವಿ ರಾವ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/01/2021 10:47 pm