ಕಾರ್ಕಳ: ಕಾರ್ಕಳ ಪುರಸಭೆಯಲ್ಲಿ ಹೊಸ ಆಡಳಿತ ಅಧಿಕಾರ ವಹಿಸಿ ಒಂದು ತಿಂಗಳು ಕಳೆದರೂ ಸಾಮಾನ್ಯ ಸಭೆ ಕರೆಯದೆ ನಿರ್ಲಕ್ಷ್ಯ ವಹಿಸುತ್ತಿದೆ. ಇದರಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಪುರಸಭೆ ಆಡಳಿತ ತಕ್ಷಣ ಚುನಾಯಿತ ಪ್ರತಿನಿಧಿಗಳ ಸಾಮಾನ್ಯ ಸಭೆ ಕರೆದು ಚರ್ಚೆಗೆ ಅವಕಾಶ ನೀಡಬೇಕೆಂದು ಪುರಸಭೆ ಸದಸ್ಯ ಶುಭದ ರಾವ್ ಆಗ್ರಹಿಸಿದ್ದಾರೆ.
ನೂತನ ಆಡಳಿತ ಅಧಿಕಾರ ವಹಿಸಿಕೊಂಡ ತಕ್ಷಣ ಚುನಾಯಿತ ಸದಸ್ಯರ ಸಭೆ ಕರೆದು ಅಭಿವೃದ್ಧಿ ಕಾರ್ಯ ಬಗ್ಗೆ ಚರ್ಚೆ ನಡೆಸುವುದು ವಾಡಿಕೆ. ಆ ಸಂದರ್ಭ ಚುನಾಯಿತ ಎಲ್ಲ ಸದಸ್ಯರು ತಮ್ಮ ತಮ್ಮ ವಾರ್ಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಮತ್ತು ಆ ಬಗ್ಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗಿದೆ. ಆದರೆ, ನೂತನ ಆಡಳಿತ ಅಧಿಕಾರ ವಹಿಸಿ ತಿಂಗಳು ಕಳೆದರೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಿದೆ. ಹಾಗಾಗಿ ತಕ್ಷಣ ಸಭೆ ಕರೆಯುವಂತೆ ಮನವಿ ಮಾಡುತ್ತೇನೆ.
ಕಸ ವಿಲೇವಾರಿ ಬಗ್ಗೆ ನೂತನ ಕಾನೂನು ಜಾರಿ ಮಾಡಿದ್ದರಿಂದ ನಾಗರಿಕರು ಗೊಂದಲದಲ್ಲಿದ್ದಾರೆ. ಇದರಿಂದ ಸರಿಯಾಗಿ ಕಸ ವಿಲೇವಾರಿಯಾಗದೆ ಮನೆಗಳಲ್ಲಿ, ವಾಣಿಜ್ಯ ಸಂಕೀರ್ಣ ಮತ್ತು ರಸ್ತೆ ಬದಿ ಕಸ ಶೇಖರಣೆಗೊಂಡು ಗಬ್ಬು ವಾಸನೆ ಬೀರಿ ಸಾಂಕ್ರಾಮಿಕ ರೋಗಗಳು ಹರಡಲು ಆಸ್ಪದ ನೀಡಿದಂತಾಗಿದೆ.
ತ್ಯಾಜ್ಯ ಘಟಕಕ್ಕೆ ಬೆಂಕಿ ಬಿದ್ದು ವಾರ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ. ಇದರ ಪರಿಣಾಮ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಿಷಪೂರಿತ ದುರ್ವಾಸನೆಯ ಗಾಳಿ ಹರಡಿ ನಾಗರಿಕರು ಸಂಕಷ್ಟ ಪಡುತ್ತಿದ್ದಾರೆ.
ಇಂತಹ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಸಾಮಾನ್ಯ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ಈ ಕೂಡಲೇ ಸಭೆ ಕರೆಯಬೇಕು ಇಲ್ಲವಾದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಶುಭದ ರಾವ್ ತಿಳಿಸಿದ್ದಾರೆ.
Kshetra Samachara
07/12/2020 11:31 am