ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ತಾತ್ಕಾಲಿಕ ನೆಲೆಯಲ್ಲಿ ಮುಂದುವರಿಸಲಾಗಿದೆ. ಇಲ್ಲಿ ಫೆ. 15ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದರೆ ತಡೆಯೊಡ್ಡಲಾಗುವುದು ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಸಿದೆ.
ಒಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ನೇತೃತ್ವದ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ತಾತ್ಕಾಲಿಕ ನೆಲೆಯಲ್ಲಿ ಸ್ಥಾಪಿಸಲಾಗಿದ್ದ ಸುರತ್ಕಲ್ ಟೋಲ್‌ಗೇಟ್ ಮುಂದುವರಿದಿದ್ದು, ಮುಂದಿನ ಫೆ.15ರಿಂದ ಫಾಸ್‌ಸ್ಟಾಗ್ ಕಡ್ಡಾಯಗೊಳಿಸುವ ಯತ್ನಗಳು ನಡೆಯುತ್ತಿದ್ದು, ಇದರ ವಿರುದ್ಧ ಉಗ್ರ ಹೋರಾಟ ಸಂಘಟಿಸಲಾಗುವುದು ಎಂದು ತಿಳಿಸಿದರು.
2018ರಲ್ಲಿ ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ಸುರತ್ಕಲ್ ಟೋಲ್ ಮುಚ್ಚಿ ಹೆಜಮಾಡಿ ಟೋಲ್ ಕೇಂದ್ರದ ಜೊತೆ ವಿಲೀನಗೊಳಿಸುವ ನಿರ್ಧಾರ ಕೈಗೊಂಡು ರಾಜ್ಯ ಸರಕಾರದ ಅನುಮೋದನೆ ಪಡೆದಿದೆ. ಆದರೆ ವಿಲೀನ ನಿರ್ಧಾರ ಅನುಷ್ಠಾನವಾಗದೆ ಬಲವಂತದ ಟೋಲ್ ಸಂಗ್ರಹ ಮುಂದುವರಿದಿದೆ. ಹೆದ್ದಾರಿ ಪ್ರಾಧಿಕಾರ ವಿಲೀನ ಪ್ರಕ್ರಿಯೆಯ ನಿರ್ಧಾರದ ಬಳಿಕವೂ ಮೂರು ತಿಂಗಳು, ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಈ ಟೋಲ್ ಕೇಂದ್ರದ ಗುತ್ತಿಗೆಯನ್ನು ನವೀಕರಿಸುತ್ತಾ ಬಂದಿದೆ. ಇದೀಗ ಫಾಸ್ಟ್ ಟ್ಯಾಗ್ ಕಡ್ಡಾಯದ ನೆಪವೊಡ್ಡಿ ಫೆ. 15ರಿಂದ ಸ್ಥಳೀಯ ವಾಹನಗಳ ಉಚಿತ ಪ್ರಯಾಣ ಸಹಿತ ಎಲ್ಲಾ ರಿಯಾಯಿತಿಗಳನ್ನು ಹಿಂಪಡೆಯಲು ಮುಂದಾಗಿದೆ. ಎಂದು ಆರೋಪಿಸಿದರು.
ಸುರತ್ಕಲ್ ಅಕ್ರಮ ಟೋಲ್ ಕೇಂದ್ರವನ್ನು ಈಗಾಗಲೇ ಆಗಿರುವ ತೀರ್ಮಾನದಂತೆ ತೆರವುಗೊಳಿಸಿ ಹೆಜಮಾಡಿ ಟೋಲ್ ಕೇಂದ್ರದ ಜೊತೆ ವಿಲೀನಗೊಳಿಸಬೇಕು. ಬಲವಂತದಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದರೆ ತಡೆಯ ಸಹಿತ ವ್ಯಾಪಕ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
Kshetra Samachara
13/02/2021 09:44 am