ಬಂಟ್ವಾಳ: ರಾಣಿ ಅಬ್ಬಕ್ಕ ಕುರಿತು ಇಂದು ದೇಶದ ಜನತೆಗೆ ತಿಳಿಸುವ ಕಾರ್ಯ ಇಂದು ಅಗತ್ಯವಿದ್ದು ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದು ನಿವೃತ್ತ ನ್ಯಾಯಾಧೀಶ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಚಂದ್ರಮ ಕಲಾ ಮಂದಿರದಲ್ಲಿ ರಾಣಿ ಅಬ್ಬಕ್ಕ ಪ್ರತಿಮೆಯನ್ನು ಅನಾವರಣ ಮಾಡಿ ಅವರು ಮಾತನಾಡಿದರು.
ರಾಣಿ ಅಬ್ಬಕ್ಕ ಮತ್ತು ತುಳು ಲಿಪಿಯ ಅಧ್ಯಯನ ನಡೆಯಬೇಕು ಎಂದ ಅವರು, ತುಕಾರಾಮ ಪೂಜಾರಿ ಅವರ ಕೆಲಸವನ್ನು ಮುಂದುವರಿಸುವ ಕಾರ್ಯಗಳು ಆಗಬೇಕು ಎಂದರು.
ಭಾರತೀಯ ಜೈನ್ ಮಿಲನ್ ನ ಉಪಾಧ್ಯಕ್ಷೆ, ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಮಾತನಾಡಿ ಅವಳಿ ಸಂಸ್ಥೆ ನಿರ್ಮಾಣ ಮಾಡಿದ ಡಾ.ತುಕಾರಾಮ ಪೂಜಾರಿ ದಂಪತಿ ಸಾಧನೆ ಅನುಕರಣೀಯ, ರಾಣಿ ಅಬ್ಬಕ್ಕದೇವಿ ಹೋರಾಟ ದೇಶದ ರಕ್ಷಣೆಗಿತ್ತು. ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಆಗಿರುವ ಅಬ್ಬಕ್ಕ ಪ್ರತಿಮೆ ಸ್ಥಾಪನೆ ಪ್ರಸ್ತುತ. ಅಬ್ಬಕ್ಕ ಹೆಸರು ವಿಮಾನ ನಿಲ್ದಾಣಕ್ಕೆ ಇಡುವುದು ಸೂಕ್ತ ಎಂದರು.
ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಏರ್ಯ ಬಾಲಕೃಷ್ಣ ಹೆಗ್ಡೆ ಅತಿಥಿಗಳಾಗಿ ಉಪಸ್ಥಿತರಿದ್ದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ.ಆಶಾಲತಾ ಸುವರ್ಣ ವಂದಿಸಿದರು.
ಡಾ.ಆರ್.ನರಸಿಂಹಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಾಧಕರನ್ನು ಗೌರವಿಸಲಾಯಿತು.
Kshetra Samachara
15/05/2022 11:56 am