ಮಂಗಳೂರು: ರಾಜ್ಯದಲ್ಲಿ 2.40 ಲಕ್ಷ ಸರ್ಕಾರಿ ನೌಕರರ ಹುದ್ದೆ ಖಾಲಿಯಿದ್ದು, ಅವುಗಳನ್ನು ರಾಜ್ಯ ಸರ್ಕಾರ ಶೀಘ್ರ ಭರ್ತಿ ಮಾಡಬೇಕು ಎಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಷಡಾಕ್ಷರಿ ಆಗ್ರಹಿಸಿದ್ದಾರೆ.
ನಗರದ ದ.ಕ. ಸರ್ಕಾರಿ ನೌಕರರ ಸಂಘದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕ ಹುದ್ದೆಗಳು ಖಾಲಿ ಇರುವ ಕಾರಣ ಈಗ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಒತ್ತಡ ಹೆಚ್ಚಾಗುತ್ತಿದೆ. ಲೋಕಸೇವಾ ಆಯೋಗ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಜರುಗಿಸಬೇಕು ಎಂದರು.
ಸರ್ಕಾರಿ ನೌಕರರಿಗೆ ಈಗಿನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ತನ್ನ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲೇ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ ರಾಜ್ಯ ಸರ್ಕಾರದ ನೌಕರರಿಗೂ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್ ಗೌಡಪ್ಪ ಪಾಟೀಲ, ಜಗದೀಶ್, ರುದ್ರಪ್ಪ ಕೃಷ್ಣ, ಮೋಹನ್ ಕುಮಾರ್ ಮತ್ತಿತರರಿದ್ದರು.
Kshetra Samachara
03/12/2020 10:31 pm