ಕಿನ್ನಿಗೋಳಿ: ಬಲವಿನಗುಡ್ಡೆ ಹೆದ್ದಾರಿಯಲ್ಲಿ ಅವೈಜ್ಞಾನಿಕ ರಸ್ತೆ ಅಗೆತ; ಅಪಘಾತ ಭೀತಿ
ಮುಲ್ಕಿ: ಕಿನ್ನಿಗೋಳಿ ಸಮೀಪದ ಬಲವಿನಗುಡ್ಡೆ ಶಿಬರೂರು ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಸೋರಿಕೆಯನ್ನು ತಡೆಗಟ್ಟಲು ಅವೈಜ್ಞಾನಿಕ ರಸ್ತೆ ಅಗೆದು, ಸ್ಥಳದಲ್ಲಿ ಕಲ್ಲುಗಳನ್ನಿಟ್ಟ ಪರಿಣಾಮ ಅಪಘಾತ ಸಂಭವಿಸಿದ್ದು, ಕೂಡಲೇ ಕಲ್ಲು ತೆರವುಗೊಳಿಸ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲವಿನ ಗುಡ್ಡೆ ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಸೋರಿಕೆ ಆಗುತ್ತಿದ್ದು, ತಡೆಗಟ್ಟುವ ನಿಟ್ಟಿನಲ್ಲಿ ಪಂಚಾಯಿತಿ ಸಿಬ್ಬಂದಿ ಸ್ಥಳದಲ್ಲಿ ಭಾರಿ ಗಾತ್ರದ ಕಲ್ಲುಗಳನ್ನು ಅಪಾಯಕಾರಿ ರೀತಿಯಲ್ಲಿ ಇಟ್ಟಿದ್ದಾರೆ.
ಆದರೆ, ಮಂಗಳವಾರ ಸಂಜೆ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರರೊಬ್ಬರು ಟಿಪ್ಪರ್ ಲಾರಿ ನಡುವಿನ ಸಂಭವನೀಯ ಅಪಘಾತವನ್ನು ತಪ್ಪಿಸಲು ಯತ್ನಿಸಿದಾಗ ಬೈಕ್ ಕಲ್ಲಿಗೆ ಡಿಕ್ಕಿ ಹೊಡೆದು ಸವಾರ ಗಾಯಗೊಂಡಿದ್ದರು. ಆದ್ದರಿಂದ ಕೂಡಲೇ ಕೆಮ್ರಾಲ್ ಗ್ರಾಪಂ ಸಿಬ್ಬಂದಿ ರಸ್ತೆಯಲ್ಲಿ ಇಟ್ಟಿರುವ ಈ ಕಲ್ಲುಗಳನ್ನು ತೆರವುಗೊಳಿಸಿ ಸಂಭವನೀಯ ಅಪಾಯ, ಅಪಘಾತವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.