ಮೂಡುಬಿದಿರೆ: ಬೆಳುವಾಯಿ ಗ್ರಾಪಂ ವ್ಯಾಪ್ತಿಯ ಕೆಂಪು ಕಲ್ಲಿನ ಕ್ವಾರೆಗೆ ಸುರಿದ ಕೈಗಾರಿಕೆ ತ್ಯಾಜ್ಯವಸ್ತುವಿನಿಂದಾಗಿ ಹತ್ತಿರದ ಕೊಳವೆಬಾವಿಯಿಂದ ಕಲುಷಿತ ನೀರು ಹೊರಬರುತ್ತಿದ್ದು, ಸ್ಥಳೀಯರಲ್ಲಿ ಈ ಬಗ್ಗೆ ಆತಂಕ ಮೂಡಿದೆ.
ಏಳು ತಿಂಗಳ ಹಿಂದೆ ಬೆಳುವಾಯಿ ನಾನಿಲ್‍ನಲ್ಲಿ ಖಾಲಿ ಬಿದ್ದಿದ್ದ ಸುಮಾರು 25 ಅಡಿ ಆಳದ ಮೂಡುಬಿದಿರೆಯ ಪೇಟೆಯಲ್ಲಿರುವ ಖಾಸಗಿ ಎಣ್ಣೆ ಮಿಲ್ಲಿನಿಂದ ತ್ಯಾಜ್ಯ ತಂದು ಸುರಿದಿದ್ದಾರೆ ಎನ್ನಲಾಗಿದೆ.
ತ್ಯಾಜ್ಯ ಸುರಿಯುವಾಗಲೇ ಗ್ರಾಪಂ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟವರ ಗಮನಕ್ಕೆ ಈ ಕುರಿತು ಸ್ಥಳೀಯರು ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆನ್ನುವುದು ಗ್ರಾಮಸ್ಥರ ಆರೋಪ.
ಸುಮಾರು ನಾಲ್ಕು ತಿಂಗಳು ಉಪಯೋಗಿಸದೆ ಇದ್ದ ಬೋರ್ ವೆಲ್ ಮೂಲಕ ಕೆಲವು ದಿನಗಳಿಂದ ನೀರನ್ನು ಹೊರಬಿಡುತ್ತಿದ್ದು, ನೀರು ತೀರಾ ದುರ್ವಾಸನೆಯಿಂದ ಕೂಡಿದೆ.
ಈ ದುರ್ವಾಸನೆಯು ಸ್ವಲ್ಪದೂರದಲ್ಲಿರುವ ಕ್ವಾರೆಯಲ್ಲಿ ತುಂಬಿಸಿರುವ ತ್ಯಾಜ್ಯ ವಸ್ತುವಿನ ದುರ್ನಾತ ಬೀರುತ್ತಿದೆ. ಪರಿಸರದ ಸುಮಾರು 400 ಮನೆಗಳಿಗೆ ನೀರು ಪೂರೈಸುವ ಬೋರ್ ವೆಲ್ ಇದಾಗಿದೆ.
ಆದರೆ, ಮಳೆಗಾಲದಲ್ಲಿ ಒಳಗೊಳಗೇ ತ್ಯಾಜ್ಯ ವಸ್ತು ಕರಗಿ ವಿವಿಧ ತೋಡುಗಳ ಮೂಲಕ ಹರಿಯುವ ನೀರನ್ನು ಕಲುಷಿತ ಗೊಳಿಸುತ್ತ, ಪರಿಸರದ ಶುದ್ಧ ನೀರಿನ ಬಾವಿಗಳನ್ನೂ ಕಲುಷಿತಗೊಳಿಸುತ್ತ ದೊಡ್ಡ ತೋಡುಗಳನ್ನು ಸೇರಿ ಬೆಳುವಾಯಿ ಪೇಟೆ, ಮಾಲಾಡಿ, ಮಂಜನಕಟ್ಟೆ, ಮಾಸ್ಟರ್‍ಕಟ್ಟೆ, ಕರಿಯನಂಗಡಿ, ಸೋನ್ಯಾಲ್ ಸೇರಿದಂತೆ ಪ್ರದೇಶಗಳ ಕುಡಿಯುವ ನೀರಿನ ಮೂಲಗಳಿಗೆ ಇದರ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
Kshetra Samachara
18/12/2020 11:04 pm