ಪಂಜ(ಸುಳ್ಯ) : ನಿನ್ನೆ ( ಮಂಗಳವಾರ ) ತಮ್ಮ ಮನೆ ಬಳಿಯಿದ್ದ ಮರದ ರೆಂಬೆ ಕಡಿಯುತ್ತಿದ್ದ ವೇಳೆ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಸುಳ್ಯ ತಾಲೂಕಿನ ಖ್ಯಾತ ಚಿತ್ರಕಲಾ ಶಿಕ್ಷಕ ಮಹಾಬಲ ಕುಳ ಅವರು ಇಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ನಿನ್ನೆ ಪಂಜದ ಕೃಷ್ಣನಗರದಲ್ಲಿರುವ ತಮ್ಮ ಮನೆಯ ಬಳಿ ಇರುವ ಮರದ ರೆಂಬೆ ಕಡಿಯಲೆಂದು ಮಹಾಬಲ ಕುಳ ಅವರು ಮರ ಏರಿದ್ದರು.
ಈ ವೇಳೆ ಮರದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ 5.30ಕ್ಕೆ ಸಾವನ್ನಪ್ಪಿದ್ದಾರೆ.
ಮಹಾಬಲ ಕುಳ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪಂಜ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಅವರು, ಈ ಹಿಂದೆ ಬೆಳ್ಳಾರೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದರು.
ಚಿತ್ರಕಲಾ ಶಿಕ್ಷಕರಾಗಿ ಮಾತ್ರವಲ್ಲದೆ, ಬಹುಮುಖ ಪ್ರತಿಭೆ ಹೊಂದಿದ್ದ ಅವರು ಸಂಘಟಕರಾಗಿ, ನಾಟಕ ನಿರ್ದೇಶಕರಾಗಿ, ನಿರೂಪಕರಾಗಿಯೂ ಗುರುತಿಸಿಕೊಂಡಿದ್ದರು.
Kshetra Samachara
11/11/2020 02:41 pm