ಮರಕಡ: ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಬೇಕೆನ್ನುವ ತಮ್ಮ ಉದ್ದೇಶದಿಂದ ಮರಕಡ -ಕುಂಜತ್ತಬೈಲ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡರೂ ಹೆಚ್ಚಿನ ಸಂಖ್ಯೆಯ ಕುಟುಂಬಗಳಿಗೂ ಈ ಶಾಲೆಯ ಅಭಿವೃದ್ಧಿಯಿಂದ ಪ್ರಯೋಜನವಾಗುತ್ತಿದೆ. ಇಲ್ಲಿ 1 ರಿಂದ 5 ತರಗತಿಯ ತನಕ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡಬೇಕೆನ್ನುವ ಬೇಡಿಕೆ ಹಾಗೂ ಎಲ್ ಕೆಜಿ, ಯುಕೆಜಿ ಕೂಡ ಆರಂಭಿಸಿದರೆ ಉತ್ತಮ ಎನ್ನುವ ಪ್ರಸ್ತಾಪ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಹೇಳಿದರು.
ಅವರು ದ.ಕ.ಜಿ.ಪಂ.ಸ.ಮಾ.ಹಿ ಪ್ರಾಥಮಿಕ ಶಾಲೆ ಮರಕಡ- ಕುಂಜತ್ತಬೈಲ್ ಇದರ ಶಾಲಾ ಆರಂಭೋತ್ಸವ ಹಾಗೂ 8 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ 7.50 ಲಕ್ಷ ರೂ ಅನುದಾನದಲ್ಲಿ ಶಾಲಾ ಕಟ್ಟಡ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಹಾಗೂ ಶಾಲಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮನಪಾ ಸದಸ್ಯರಾದ ಲೋಹಿತ್ ಅಮೀನ್, ಶರತ್ ಕುಮಾರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು, ಮೇಲುಸ್ತುವಾರಿ ಸಮಿತಿಯ ಪ್ರಮುಖರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘದ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
16/05/2022 04:13 pm