ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ಅಧ್ಯಕ್ಷ ಸುಭಾಷ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು
ಸಭೆಯಲ್ಲಿ ಆಶ್ರಯ ಸಮಿತಿಯ ಸಭೆ ನಡೆದ ಬಗ್ಗೆ ಸದಸ್ಯ ಮಂಜುನಾಥ ಕಂಬಾರ್ ಪ್ರಶ್ನಿಸಿ, ಸರಕಾರ ಆಶ್ರಯ ಸಮಿತಿ ಸದಸ್ಯರನ್ನು ನೇಮಿಸದೆ ಹೇಗೆ ಸಭೆ ನಡೆಯಿತು? ಎಂದು ಪ್ರಶ್ನಿಸಿದರು, ಜಿಲ್ಲಾಧಿಕಾರಿಗೂ ದೂರು ನೀಡಿದ್ದೇನೆ ಸ್ಪಷ್ಟನೆ ನೀಡಿ ಎಂದು ಆಗ್ರಹಿಸಿದರು
ಈ ಬಗ್ಗೆ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ ಮಾತನಾಡಿ ಅಮೃತಾನಂದಮಯಿ ನಗರದಲ್ಲಿರುವ 73 ಫಲಾನುಭವಿಗಳ ಪೈಕಿ 26 ಹಕ್ಕುಪತ್ರಗಳು ರದ್ದಾಗಿದ್ದು, ಅವುಗಳ ವಿಲೇವಾರಿಗೆ ಸರಕಾರದ ಸೂಚನೆಯಂತೆ ಆಶ್ರಯ ಸಮಿತಿಯ ಸಭೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದಿರುವುದಾಗಿ ಉತ್ತರಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು
ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಚತುಷ್ಪಥ ರಸ್ತೆ ಅರ್ಧಂಬರ್ಧ ಕಾಮಗಾರಿಯಿಂದ ಅಪಘಾತ ವಲಯವಾಗಿದ್ದು ಮುಲ್ಕಿಯಲ್ಲಿ ಫ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಾಣಕ್ಕೆ ನಪಂ ನಿರ್ಣಯ ಕೈಗೊಳ್ಳುವಂತೆ ಸದಸ್ಯ ಯೋಗೀಶ್ ಕೋಟ್ಯಾನ್ ಮನವಿ ಮಾಡಿದರು.
ಕಾರ್ನಾಡ್ ದರ್ಗಾ ರಸ್ತೆಯಲ್ಲಿ ರಸ್ತೆ ಅತಿಕ್ರಮಿಸಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಸದಸ್ಯೆ ವಂದನಾ ಕಾಮತ್ ಆರೋಪಿಸಿದಾಗ ಬಪ್ಪನಾಡು ಬಳಿ ಕೆಲವು ವಸತಿ ಸಂಕೀರ್ಣಗಳೂ ಅತಿಕ್ರಮಣ ನಡೆಸಿದ್ದಾಗಿ ಸದಸ್ಯ ಪುತ್ತುಬಾವ ಹೇಳಿದ್ದು ಆರೋಪ-ಪ್ರತ್ಯಾರೋಪಗಳ ವಾಕ್ಸಮರ ನಡೆಯಿತು. ಈ ಸಂದರ್ಭ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮಧ್ಯಪ್ರವೇಶಿಸಿ ಪರೀಸ್ಥಿತಿ ತಿಳಿಗೊಳಿಸಿ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಮುಲ್ಕಿ ನ.ಪಂ ವ್ಯಾಪ್ತಿಯಲ್ಲಿ 16 ಕೋಟಿ ರೂ ವೆಚ್ಚದ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿದ್ದು ಈ ಬಗ್ಗೆ ಸೂಕ್ತ ತನಿಖೆಗೆ ಲೋಕಾಯುಕ್ತಕ್ಕೆ ದೂರು ನೀಡಬೇಕೆಂದು ಯೋಗೀಶ್ ಕೋಟ್ಯಾನ್ ಅಗ್ರಹಿಸಿದರು.
ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬದಿ ಬ್ಯಾನರ್ ಅಳವಡಿಕೆಗೆ ನಿಷೇಧ ಹೇರುವಂತೆ ಮನವಿ ಮಾಡಲಾಯಿತು.
ಮುಲ್ಕಿ ಬಸ್ಸು ನಿಲ್ದಾಣ ಯೋಜನೆ ನೆನೆಗುದಿಗೆ ಬಿದ್ದಿರುವ ಬಗ್ಗೆ ವಿಮಲಾ ಪೂಜಾರಿ ಪ್ರಶ್ನಿಸಿದರು
ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ನಪಂ ಸದಸ್ಯರೆಲ್ಲರೂ ಒಗ್ಗೂಡಿ ಆಗ್ರಸಿದರು. ಈ ಬಗ್ಗೆ ಉತ್ತರಿಸಿದ ಪಶುಸಂಗೋಪನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಸ್.ನಾಗರಾಜ್ ಮಾತನಾಡಿ ಯಾವುದೇ ಕಾರಣಕ್ಕೂ ನಾಯಿಗಳನ್ನು ಕೊಲ್ಲುವಂತಿಲ್ಲ. ಸ್ಥಳೀಯಾಡಳಿತವು ಸಂತಾನಹರಣ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದರು.
ನಗರೋತ್ಥಾನ ಇಲಾಖೆಯ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ ಮೂಲಕ ಮೂಲ್ಕಿ ನಪಂಗೆ ರೂ.5ಕೋಟಿ ಬಿಡುಗಡೆಯಾಗಿದ್ದು, , ಸದಸ್ಯರು ಅಗತ್ಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.
ಅಂಬೇಡ್ಕರರ್ ವಸತಿ ಯೋಜನೆಯಲ್ಲಿ 12 ಮತ್ತು ವಾಜಪೇಯಿ ವಸತಿ ಯೋಜನೆಯಲ್ಲಿ 31 ಮನೆಗಳು ಮಂಜೂರಾಗಿದ್ದು, ಶೀಘ್ರ ಪಟ್ಟಿ ತಯಾರಿಗೆ ಸಹಕರಿಸುವಂತೆ ವಿನಂತಿಸಲಾಯಿತು.
ಜಿಲ್ಲಾಡಳಿತದ ನಿರ್ದೇಶನದಂತೆ ವ್ಯಾಕ್ಷಿನ್ ಪಡೆಯದ ವ್ಯಕ್ತಿಗಳ ಅಂಗಡಿಗಳನ್ನು ಬಂದ್ ಮಾಡಿಸಲು ಸಭೆ ನಿರ್ಧರಿಸಿತು.
ಮೆಸ್ಕಾಂ ಅಧಿಕಾರಿ ವಿವೇಕಾನಂದ ಶೆಣೈ, ಪೋಲಿಸ್ ಅಧಿಕಾರಿ ಕೃಷ್ಣಪ್ಪ, ಕೃಷಿ ಇಲಾಖೆಯ ಪ್ರಭಾರ ಅಧಿಕಾರಿ ಅಬ್ದುಲ್ ಬಶೀರ್ ಇಲಾಖಾ ಮಾಹಿತಿ ನೀಡಿದರು. ದಾರಿದೀಪಗಳ ನಿರ್ವಹಣೆ ಗುತ್ತಿಗೆದಾರ ಸನ್ಮತ್ ವಿವಿಧ ದೂರಗಳಿಗೆ ಉತ್ತರಿಸಿದರು.
ಉಪಾಧ್ಯಕ್ಷ ಸತೀಶ್ ಅಂಚನ್ ಮತ್ತಿತರರು ಸಭೆಯಲ್ಲಿ ಇದ್ದರು.
Kshetra Samachara
20/01/2022 05:52 pm