ಮುಲ್ಕಿ:ಸ್ವಚ್ಛ ಗ್ರಾಮ ಸ್ವಸ್ಥ ಭಾರತ ದ್ಯೇಯ ವಾಕ್ಯದಡಿ ಋತು ಚಕ್ರದ ಅವಧಿಯಲ್ಲಿ ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪ್ ಕಿನ್ ಗಳ ಸೂಕ್ತ ವಿಲೇವಾರಿಗಾಗಿ ಕಿಲ್ಪಾಡಿ ಗ್ರಾ.ಪಂ ನಿಂದ ಪಿಂಕ್ ಬಾಕ್ಸ್ ಪರಿಕಲ್ಪನೆಯಡಿ ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ನ್ಯಾಪ್ ಕಿನ್ ಗಳನ್ನು ಸಂಗ್ರಹಿಸುವ ಸಲುವಾಗಿ "ಋತು" ಎಂಬ ಶೀರ್ಷಿಕೆಯಡಿ ಪಿಂಕ್ ಬಾಕ್ಸ್ ಪರಿಕಲ್ಪನೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಗೋಪಿನಾಥ ಪಡಂಗ, ಪಿಡಿಒ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು
ಏನಿದು ಪಿಂಕ್ ಬಾಕ್ಸ್..?
ಗ್ರಾಮ ಪಂಚಾಯ್ತಿ ಕಚೇರಿಯು ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಪ್ರತಿಯೊಂದು ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೊಂದರಂತೆ ಗುಲಾಬಿ ಬಣ್ಣದ ಡಸ್ಟ್ ಬಿನ್ ಗಳನ್ನು ಮಕ್ಕಳ ಕೈಗೆ ಸಿಗದಷ್ಟು ಎತ್ತರದಲ್ಲಿರುವಂತೆ ಕೇವಲ ಮಹಿಳೆಯರು ಪ್ರವೇಶಿಸುವಂತಹ ಸ್ಥಳಗಳಲ್ಲಿ ಅಳವಡಿಸಲಾಗುವುದು.
ವಿದ್ಯಾರ್ಥಿನಿಯರು ಹಾಗೂ ಗ್ರಾಮದ ಮಹಿಳೆಯರು ತಾವು ಬಳಸಿದ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಪೇಪರ್ ನಲ್ಲಿ ಸುತ್ತಿ ತಂದು ಗುಲಾಬಿ ಬಾಕ್ಸ್ ನಲ್ಲಿ ತಂದು ಹಾಕುತ್ತಾರೆ. ದಿನಕ್ಕೊಮ್ಮೆ ಪ್ರತಿ ಕೇಂದ್ರಕ್ಕೂ ಭೇಟಿನೀಡುವ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಸೂಕ್ತ ಮುಂಜಾಗ್ರತೆಯೊಂದಿಗೆ ಸಂಗ್ರಹಿಸಿ ಅಳವಡಿಸಿರುವ ಇನ್ಸಿನರೇಟರ್ ಯಂತ್ರದ ಮೂಲಕ ವಿಲೇವಾರಿ ಮಾಡುತ್ತಾರೆ.
ಇನ್ಸಿನರೇಟರ್ ಯಂತ್ರ
ಸುಮಾರು 900° ಸೆಲ್ಸಿಯಸ್ ಉಂಷ್ಣಾಂಶದಲ್ಲಿ ಉರಿಯುವ ಈ ಆಧುನಿಕ ಯಂತ್ರವು ಏಕ ಕಾಲಕ್ಕೆ 50 ರಿಂದ 60 ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು 20 ನಿಮಿಷಗಳಲ್ಲಿ ಸುಟ್ಟು ಬೂದಿ ಮಾಡುತ್ತದೆ. ಅಷ್ಟು ಪ್ರಮಾಣದ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಸುಡುವಾಗಲೂ ಅದರಿಂದ ಹೊರಬರುವ ಅಲ್ಪ ಪ್ರಮಾಣದ ಹೊಗೆಯು ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟು ಮಾಡಲಾರದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಮತ್ತು ಏಕ ಕಾಲಕ್ಕೆ 60 ಪ್ಯಾಡ್ ಗಳನ್ನು ದಹಿಸಿದಾಗಲೂ ಕೇವಲ ಗರಿಷ್ಟ 1% ನಷ್ಟು ಮಾತ್ರ ಬೂದಿ ಉಳಿಯುತ್ತದೆ ಅದನ್ನು ಶೌಚಾಲಯಕ್ಕೆ ಹಾಕಿಬಿಡಬಹುದು. ಇದುವರೆಗೂ ಸ್ವಸ್ಥ ಸಮಾಜಕ್ಕೊಂದು ಸವಾಲಾಗಿದ್ದ, ಬಳಸಿ ಅಲ್ಲಲ್ಲಿ ಬೀಸಾಡುತ್ತಿದ್ದ ಸ್ಯಾನಿಟರಿ ನ್ಯಾಪ್ ಕಿನ್ ಗಳಿಂದ ಪರಿಸರಕ್ಕೆ ಹಾಗೂ ಮನುಕುಲಕ್ಕೆ ಉಂಟಾಗಬಹುದಾದ ಹಾನಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ.
Kshetra Samachara
01/10/2021 07:09 am