ಬಂಟ್ವಾಳ: ಬಂಟ್ವಾಳದ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಫೆ.11ರಿಂದ 25ರ ವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೃಷಿ ಉತ್ಸವ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸ್ಥಾಪಕ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದ್ದಾರೆ.
ಈ ಸಂದರ್ಭ ಗೌರವಾಧ್ಯಕ್ಷ ಪಿ.ಜಯರಾಮ ರೈ ವಿಟ್ಲ, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ಉಪಾಧ್ಯಕ್ಷ ರಿಯಾಝ್ ಹುಸೇನ್, ಗೌರವ ಸಲಹೆಗಾರರಾದ ಸರಪಾಡಿ ಅಶೋಕ್ ಶೆಟ್ಟಿ, ಪ್ರಕಾಶ್ ಬಿ. ಶೆಟ್ಟಿ ಶ್ರೀಶೈಲ, ಎಚ್ಕೆ ನಯನಾಡು, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಮಹಮ್ಮದ್ ನಂದರಬೆಟ್ಟು, ಜಯಾನಂದ ಪೆರಾಜೆ, ರತ್ಮದೇವ ಪುಂಜಾಲಕಟ್ಟೆ, ನಿರ್ದೇಶಕರಾದ ಮಹಮ್ಮದ್ ನಂದಾವರ, ದೇವಪ್ಪ ಕುಲಾಲ್ ಪಂಜಿಕಲ್ಲು, ಚಿಣ್ಣರ ಅಧ್ಯಕ್ಷೆ ಭಾಗ್ಯಶ್ರೀ, ಸಂಯೋಜನಾ ಸಮಿತಿಯ ಸೌಮ್ಯ ಭಂಡಾರಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಫೆ.11ರಂದು ಗುರುವಾರ ಸಂಜೆ 4.30ಕ್ಕೆ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಮೈದಾನದವರೆಗೆ ವಿವಿಧ ಕಲಾ ತಂಡಗಳ ಸೇರುವಿಕೆಯಲ್ಲಿ ಜಾನಪದ ದಿಬ್ಬಣದ ಮೆರವಣಿಗೆ ನಡೆಯಲಿದ್ದು, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್ .ಆರ್. ಉದ್ಘಾಟಿಸುವರು. ಸಂಜೆ 5.30ಕ್ಕೆ ಕೃಷಿ ಮೇಳ, ಕರಾವಳಿ ಕಲೋತ್ಸವದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸುವರು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವೇದಿಕೆಯನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಸಚಿವರಾದ ಎಸ್. ಅಂಗಾರ ಉದ್ಘಾಟಿಸುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು. ಉಳ್ಳಾಲ ಶಾಸಕ ಯು.ಟಿ.ಖಾದರ್ ಅಮ್ಯೂಸ್ ಮೆಂಟ್ ಪಾರ್ಕ್ ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ಚಿಣ್ಣರ ಲೋಕದ ಸೇವಾ ಸಂಸ್ಥೆಯ ಐಸಿರಿ ಕನ್ನಡ ತುಳು ಆಲ್ಬಂ ಗೀತೆಯ ಬಿಡುಗಡೆ ನಡೆಯಲಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ.ಎಂ.ಮೋಹನ್ ಆಳ್ವ ಬಿಡುಗಡೆಗೊಳಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಲಿಮ್ಕಾ ದಾಖಲೆಯ ಮುಂಬ ಕಲಾ ಜಗತ್ತು ಸಂಚಾಲಕ, ಚಲನ ಚಿತ್ರನಟ, ನಿರ್ಮಾಪಕ ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರಿಗೆ ಕರಾವಳಿ ಕಲಾಸೌರಭ ರಾಜ್ಯ ಪ್ರಶಸ್ತಿ ಮತ್ತು ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ದಿಯಾ ರಾವ್ ಕುಂಬ್ಳೆ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.
Kshetra Samachara
06/02/2021 10:24 pm