ಮೂಡುಬಿದಿರೆ: ಮಾಜಿ ಸಚಿವ, ಎಂಸಿಎಸ್ ಬ್ಯಾಂಕ್‍ನ ಮಾಜಿ ಅಧ್ಯಕ್ಷ ದಿ. ಅಮರನಾಥ ಶೆಟ್ಟಿ ಅವರ ಮೊದಲ ವರ್ಷದ ಸಂಸ್ಮರಣೆ ಎಂಸಿಎಸ್ ಬ್ಯಾಂಕ್‍ನಲ್ಲಿ ಬುಧವಾರ ನಡೆಯಿತು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಅಮರನಾಥ ಶೆಟ್ಟಿ ಜಿಲ್ಲೆ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಯುವ ರಾಜಕಾರಣಿಗಳಿಗೆ ಆದರ್ಶ. ಎಂಸಿಎಸ್ ಬ್ಯಾಂಕ್‍ನಲ್ಲಿ ಅವರ ಪುತ್ಥಳಿ, ನಗರದ ರಸ್ತೆಗೆ ಕೆ. ಅಮರನಾಥ ಶೆಟ್ಟಿ ಎಂದು ನಾಮಕರಣ ಮತ್ತು ಅವರ ಹೆಸರಿನಲ್ಲಿ ವೃತ್ತ ರಚಿಸುವ ಮೂಲಕ ಕೆ.ಅಮರನಾಥ ಶೆಟ್ಟಿ ಹೆಸರನ್ನು ಚಿರಸ್ಥಾಯಿಗೊಳಿಸುವ ಕೆಲಸ ನಡೆದಿರುವುದು ಶ್ಲಾಘನಾರ್ಹ ಎಂದರು.
ಅಮರನಾಥ ಶೆಟ್ಟಿ ಪುತ್ಥಳಿ ಅನಾವರಣಗೊಳಿಸಿದ ಬೈಂದೂರು ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಮಾತನಾಡಿ, ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿಕರಿಗೆ ತೋರುವ ಕಾಳಜಿಯಂತೆ ಅಮರನಾಥ ಶೆಟ್ಟಿ ಎಂಸಿಎಸ್ ಬ್ಯಾಂಕ್ ಮೂಲಕ ಕೃಷಿಕರ ಕಷ್ಟಗಳಿಗೆ ನೆರವಾಗುತ್ತಿದ್ದರು. ರಾಜಕೀಯದಲ್ಲಿ ಸಹಾಯಹಸ್ತ ನೀಡುವಾಗ ಪರ- ವಿರೋಧ ಎಂಬುದನ್ನು ಪರಿಗಣಿಸುತ್ತಿರಲಿಲ್ಲ ಎಂದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಎಂಸಿಎಸ್ ಬ್ಯಾಂಕ್‍ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ, ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ ಮೊಗಸಾಲೆ, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ಬ್ಯಾಂಕ್‍ನ ವಿಶೇಷ ಕರ್ತವ್ಯ ಅಧಿಕಾರಿ ಚಂದ್ರಶೇಖರ್ ಎಂ. ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ಜಯರಾಮ ಕೋಟ್ಯಾನ್ ವಂದಿಸಿದರು.
Kshetra Samachara
28/01/2021 01:38 pm