ಬಂಟ್ವಾಳ: ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾಕ್ಕೆ ಸೂಕ್ತ ಕಾನೂನನ್ನು ರೂಪಿಸಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಮಿತಿ ಕರೆ ನೀಡಿದನ್ವಯ ಬಂಟ್ವಾಳದಲ್ಲಿ ಪತ್ರ ಚಳವಳಿ ಅಭಿಯಾನ ಕೈಗೊಳ್ಳಲಾಯಿತು.
ಎಬಿವಿಪಿ ಬಂಟ್ವಾಳ ಶಾಖೆ ವತಿಯಿಂದ ಬಿ.ಸಿ.ರೋಡು ಹಾಗೂ ಸಿದ್ದಕಟ್ಟೆ ಅಂಚೆ ಕಚೇರಿ ಬಳಿ ಶನಿವಾರ ಪತ್ರ ಚಳವಳಿ ಅಭಿಯಾನ ನಡೆದಿದ್ದು, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸೂಕ್ತ ಕಾನೂನು ರೂಪಿಸಲು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಮಾದಕ ವಸ್ತು ಬಳಕೆ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿದೆ.ಈ ಜಾಲಕ್ಕೆ ಪ್ರಮುಖವಾಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಸಮುದಾಯವೇ ಬಲಿಯಾಗುತ್ತಿರುವುದು ಅಪಾಯಕಾರಿ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಹು ಪ್ರಭಾವಿಗಳು ಭಾಗಿಯಾಗಿರುವ ಈ ಜಾಲ ಮಟ್ಟ ಹಾಕುವ ಸವಾಲು ಸರ್ಕಾರದ ಮುಂದಿದೆ. ಅದಕ್ಕಾಗಿ ಪ್ರಬಲ ಕಾನೂನು ರೂಪಿಸಿದರೆ ಪರಿಹಾರ ಸಾಧ್ಯ.
ಸರ್ಕಾರ ನಿಷ್ಪಕ್ಷಪಾತ ತನಿಖೆ ಹಾಗೂ ಕಾನೂನು ರೂಪಿಸಿ ಈ ದಂಧೆ ವಿರುದ್ಧ ಸಮರ ಸಾರಬೇಕೆಂದು ಪತ್ರ ಚಳವಳಿ ಮೂಲಕ ಆಗ್ರಹಿಸಲಾಗಿದ್ದು, ಪತ್ರವನ್ನು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಿಕೊಡಲಾಯಿತು. ಈ ಸಂದರ್ಭ ತಾಲೂಕು ಸಂಚಾಲಕ ಹರ್ಷಿತ್ ಕೊಯಿಲ, ಸಹ ಸಂಚಾಲಕ ದಿನೇಶ್ ಕೊಯಿಲ,ನಗರ ಕಾರ್ಯದರ್ಶಿ ಅಖಿಲಾಷ್, ಕಾಲೇಜು ಘಟಕದ ಅಧ್ಯಕ್ಷ ಗುರುಪ್ರಸಾದ್ ಸಿದ್ದಕಟ್ಟೆ, ನಗರ ಸಹ ಕಾರ್ಯದರ್ಶಿಗಳಾದ ನಾಗರಾಜ್ ಶೆಣೈ ,ಗಗನ್ ,ಪ್ರಶಾಂತ್ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/09/2020 07:49 pm