ಮುಲ್ಕಿ : ಸುರತ್ಕಲ್ ಬಂಟರ ಸಂಘ ಕೇವಲ ಒಂದು ಸಂಸ್ಥೆಯಾಗದೇ ಸಮಾಜದ ಎಲ್ಲ ಸ್ತರದ ಸಂಸ್ಥೆಗಳನ್ನು ಒಗ್ಗೂಡಿಸುವ, ಸರ್ವರನ್ನೂ ಸಮಾಜದಲ್ಲಿ ಸದೃಢರಾಗುವಂತೆ ಮಾಡುತ್ತಿದೆ. ಬಂಟರ ಸಂಘದ ಕಾರ್ಯವೈಖರಿಯೂ ಎಲ್ಲ ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ್ ಎ. ಕೋಟ್ಯಾನ್ ಹೇಳಿದರು. ಅವರು ಆದಿತ್ಯವಾರ ಸುರತ್ಕಲ್ ಬಂಟರ ಸಂಘದ ವಾರ್ಷಿಕ ಸಮಾವೇಶ ಅಭಿನಂದನೆ, ಸಹಾಯಹಸ್ತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಮಾತನಾಡಿ, ಬಂಟರ ಸಂಘ ತನ್ನ ಸಮುದಾಯ ಮಾತ್ರವಲ್ಲ, ಇತರ ಸಮುದಾಯವನ್ನೂ ಸಮಾಜದಲ್ಲಿ ಮುಂಚೂಣಿಗೆ ತರುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದರು. ಮುಖ್ಯ ಅತಿಥಿ ನವಮುಂಬಯಿ ಭವಾನಿ ಶಿಪ್ಪಿಂಗ್ ಸರ್ವೀಸಸ್ ಕಂಪನಿ ಎಂಡಿ, 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ( ಹೊರನಾಡು ಕನ್ನಡಿಗ) ಕುಸುಮೋಧರ ದೇರಣ್ಣ ಶೆಟ್ಟಿ ಚೆಲ್ಲಡ್ಕ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಸಮಾಜದವರನ್ನು ಗುರುತಿಸಿ ಸದೃಢಗೊಳಿಸುವುದಲ್ಲದೆ, ಭಿನ್ನ ಸಾಮರ್ಥ್ಯದ ವಿಶೇಷ ಚೇತನರಿಗೂ ನಮ್ಮ ಸಂಘ ಸದಾ ಬೆನ್ನೆಲುಬಾಗಿರಬೇಕು ಎಂದರು.
ರಾಜ್ಯೋತ್ಸವ ಪುರಸ್ಕೃತ ಕುಸುಮೋಧರ ದೇರಣ್ಣ ಶೆಟ್ಟಿ ಚೆಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ವಹಿಸಿದ್ದರು. ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾರತ್ನ ಪುರಸ್ಕೃತ ಖಂಡಿಗೆ ಗೋಪಾಲಕೃಷ್ಣ ಸರ್ವೋತ್ತಮ ಪ್ರಭು ಮಾಧವನಗರ, 2020ನೇ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪದ್ಮನಾಭ ಕೆ. ಸುರತ್ಕಲ್, ಯೋಗೀಶ್ ಕಾಂಚನ್ ಬೈಕಂಪಾಡಿ ಹಾಗೂ ಲಾಕ್ ಡೌನ್ ಸಂದರ್ಭ ವೈದ್ಯಕೀಯ ಸೇವೆ ಸಲ್ಲಿಸಿದ ಡಾ.ಸುರೇಶ್ ಸುರತ್ಕಲ್, ಕಾನ ಮಿಸ್ಕಿತ್ ಆಸ್ಪತ್ರೆ ನಿರ್ದೇಶಕ ಡಾ.ಜಿ.ಕ್ಲಿಫರ್ಡ್ ಅವರನ್ನು ಸನ್ಮಾನಿಸ ಲಾಯಿತು.
ಡಾ.ಪಿ.ವಿ.ಶೆಟ್ಟಿ ಮುಂಬಯಿ ಇವರಿಂದ ವರ್ಷಂಪ್ರತಿ ನೀಡಲ್ಪಡುವ ವಿದ್ಯಾರ್ಥಿವೇತನ ಮತ್ತು ವಿಶೇಷಚೇತನರಿಗೆ ಸಹಾಯಹಸ್ತ ನೀಡಲಾಯಿತು. ಮಂಗಳೂರು ಸಣ್ಣ ನೀರಾವರಿ ವಿಭಾಗ ಕಾರ್ಯಪಾಲಕ ಅಭಿಯಂತರ ಗೋಕುಲ್ ದಾಸ್, ಮುಂಬಯಿ ಬಂಟರ ಸಂಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಕರ್ನೂರ್ ಮೋಹನ್ ರೈ, ಮಂಗಳೂರು ಸಂಸ್ಕಾರ ಭಾರತಿ ಅಧ್ಯಕ್ಷ ಪುರುಷೋತ್ತಮ ಕೆ.ಭಂಡಾರಿ, ಬಂಟರ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಶೆಟ್ಟಿ, ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಪಡ್ರೆ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜತೆ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುಧಾಕರ್ ಎಸ್. ಪೂಂಜ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರಿ ಡಿ.ಶೆಟ್ಟಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ನಡೆದ ಗ್ರಾಮವಾರು ನೃತ್ಯ ಸ್ಪರ್ಧೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಕುಳಾಯಿ-ಹೊಸಬೆಟ್ಟು ಗ್ರಾಮ, ದ್ವಿತೀಯ ಇಡ್ಯಾ, ಚೇಳ್ಯಾರ್ ಗ್ರಾಮ, ತೃತೀಯ ಸುರತ್ಕಲ್ ಗ್ರಾಮ ಪ್ರಶಸ್ತಿ ಪಡೆಯಿತು. ಸೀನಿಯರ್ ವಿಭಾಗದಲ್ಲಿ ಪ್ರಥಮ ಇಡ್ಯಾ, ದ್ವಿತೀಯ ಸುರತ್ಕಲ್, ತೃತೀಯ ಕಾಟಿಪಳ್ಳ ಗ್ರಾಮ ಪ್ರಶಸ್ತಿ ಪಡೆಯಿತು.
Kshetra Samachara
22/12/2020 10:58 pm