ಮಂಗಳೂರು : ಬಂಟ್ವಾಳ ಹಾಗೂ ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸಂದರ್ಭ ಪೆಟ್ರೋಲ್ ಬಂಕ್ಗಳಲ್ಲಿ ನಡೆದ ಕಳ್ಳತನ ಹಾಗೂ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ಹಾಗೂ ಉಳ್ಳಾಲ ಠಾಣೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೆ.ಸಿ.ರೋಡ್ ನಿವಾಸಿ ಮೊಹಮ್ಮದ್ ಸುಹೈಲ್ ಯಾನೆ ಅಚ್ಚು(19), ಫಳ್ನೀರ್ ರಸ್ತೆ ಮಹಾರಾಜ ಹೈಟ್ಸ್ ಅಪಾರ್ಟ್ಮೆಂಟ್ ನಿಮಾಸಿ ಮಹಮ್ಮದ್ ಅರ್ಫಾನ್ (20), ತಲಪಾಡಿ ಕೆ.ಸಿ ನಗರ ನಿವಾಸಿಗಳಾದ ಆಶೀಕ್ ಯಾನೆ ಅಹ್ಮದ್ ಆಶಿಕ್ ಯಾನೆ ಕೊಲ್ಲೇ ಆಶಿಕ್ (19), ಕೋಟೆಕಾರು ಅಜ್ಜಿನಡ್ಕ ಮೊಹಮ್ಮದ್ ಇರ್ಫಾನ್ (20), ಅಡ್ಯಾರು, ಕಣ್ಣೂರು ನಿವಾಸಿ ಮೊಹಮ್ಮದ್ ರಮೀಜ್ (19) ಹಾಗೂ ತಲಪಾಡಿ ಕೆ.ಸಿ ನಗರ ನಿವಾಸಿ ಅಬ್ದುಲ್ ರಹಿಮಾನ್ ಫೈಜಲ್ (21) ಎಂದು ಗುರುತಿಸಲಾಗಿದೆ.
ಕೃತ್ಯದ ಸಂದರ್ಭ ಆರೋಪಿಗಳು ಬಳಸಿದ್ದ ಹೆಲ್ಮೆಟ್, ನಗದು, ಬೈಕ್ ಸೇರಿದಂತೆ ಮಾರಕಾಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 3ರ ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ನೀಡಿದ ಮಾಹಿತಿಯಂತೆ ಈ ತಂಡದ ಇಬ್ಬರು ಸಹಚರರನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಸೆಪ್ಟೆಂಬರ್ 20 ರ ರಾತ್ರಿ ಮಂಗಳೂರು ನಗರದ ಉಜ್ಜೋಡಿಯಲ್ಲಿರುವ ದಾಮೋದರ್ ಸುವರ್ಣ ಪೆಟ್ರೋಲ್ ಬಂಕ್ ಕಚೇರಿಗೆ ಬೈಕ್ ಗಳಲ್ಲಿ ತೆರಳಿದ್ದು, ಅವರು ಶಟರ್ ಮುರಿದು ಕಚೇರಿಯಲ್ಲಿ ಇಟ್ಟಿದ್ದ ಹಣವನ್ನು ಕಳವು ಮಾಡಿದ್ದರು.
ಈ ಸಂಬಂಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೆಟ್ರೋಲ್ ಬಂಕ್ನಿಂದ ಹಣವನ್ನು ಕದಿಯುವ ಪ್ರಯತ್ನ ನಡೆದಿತ್ತು.
ಅದೇ ದಿನ ರಾತ್ರಿ, ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೆಟ್ರೋ ಬಂಕ್ನಲ್ಲಿ ಕಳ್ಳತನ ನಡೆದಿತ್ತು.
ಕಂಕನಾಡಿ ನಗರ ಠಾಣೆಯ ಪಿಐ ಹಾಗೂ ಡಿಸಿಪಿ, ಎಸಿಪಿ ನೇತೃತ್ವದಲ್ಲಿ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭ, ಏಳು ಅಪರಾಧ ಕೃತ್ತಗಳು ಬೆಳಕಿಗೆ ಬಂದಿವೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸೆಪ್ಟೆಂಬರ್ 20 ರಂದು ಬಂಟ್ವಾಳದ ದಾಸಕೋಡಿಯಲ್ಲಿ ಪೆಟ್ರೋಲ್ ಬಂಕ್ ಕಾರ್ಮಿಕರಿಗೆ ಬೆದರಿಕೆ ಹಾಕಿ ಅವರಿಂದ ಹಣವನ್ನು ಲೂಟಿ ಮಾಡಿದ್ದರು.
ಸೆಪ್ಟೆಂಬರ್ 3 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಲಾತಬೆಟ್ಟು ದೈಕಿನಕಟ್ಟೆಯ ಭಾರತ್ ಪೆಟ್ರೋಲ್ ಬಂಕ್ ಕಚೇರಿಯ ಬಾಗಿಲು ಒಡೆದು ನಗದು ಕಳವು ಗೈದಿದ್ದಾರೆ.
ಅದೇ ತಂಡ 2019ರಲ್ಲಿ ಕೋಟೆಕಾರ್ ಬೀರಿಯ ಮೆಸ್ಕಾಂನ ಎಟಿಪಿ ಯಂತ್ರದಿಂದ ಹಣವನ್ನು ಕಳವು ಮಾಡಿತ್ತು.
ಸೆಪ್ಟೆಂಬರ್ 23 ರಂದು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿನ ಸೈಂಟ್ ಸೆಬಾಸ್ಟಿಯನ್ ಶಿಕ್ಷಣ ಸಮೂಹದ ಕಚೇರಿಗೆ ನುಗ್ಗಿ ಸಿಸಿಟಿವಿ ದ್ವಂಸ ಮಾಡಿ ಹಣ ಕಳ್ಳತನ, ಸೆಪ್ಟೆಂಬರ್ 20 ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡ್ಯಾರ್ ನಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಿಂದ ನಗದು ಯತ್ನ ಮಾಡಿರುವುದು ವಿಚಾರಣೆ ಸಂದರ್ಭ ತಿಳಿದುಬಂದಿದೆ.
ಪೆಟ್ರೋಲ್ ಬಂಕ್ ಮಾಲೀಕರ ಸಂಘವು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ಹೆಚ್ಚುತ್ತಿರುವ ಕಳ್ಳತನಗಳಿಂದಾಗಿ ತಮಗೆ ಭದ್ರತೆ ಒದಗಿಸುವಂತೆ ಕೋರಿದ್ದರು.
ಕೃಪೆ:ದೈ.ವ.ವೆಬ್
Kshetra Samachara
04/10/2020 12:18 pm