ರಿಯಾದ್: ವಿವಿಧ ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಒಂದೇ ದಿನ ದಾಖಲೆಯ 81 ಮಂದಿಯನ್ನು ಮರಣದಂಡನೆಗೆ ಒಳಪಡಿಸಲಾಗಿದೆ ಎಂದು ಸೌದಿ ಅರೇಬಿಯಾ ಶನಿವಾರ ತಿಳಿಸಿದೆ. ಇದು ಸೌದಿ ಅರೆಬಿಯಾದ ಆಧುನಿಕ ಇತಿಹಾಸದಲ್ಲೇ ಅತಿ ದೊಡ್ಡ ಶಿಕ್ಷೆ ಜಾರಿಗೊಳಿಸಿದ ದಿನವಾಗಿದೆ. 1980ರಲ್ಲಿ ಮೆಕ್ಕಾದಲ್ಲಿನ ಮಸೀದಿಯನ್ನು ವಶಪಡಿಸಿಕೊಂಡ 63 ಅಪರಾಧಿಗಳಿಗೆ ತಲೆದಂಡ ಮಾಡಲಾಗಿತ್ತು.
ಶಿಕ್ಷೆಗೆ ಗುರಿಯಾದವರಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪು ಅಥವಾ ಅಲ್ ಕೈದಾ, ಯೆಮೆನ್‌ನ ಹುತಿ ಬಂಡುಕೋರ ಪಡೆಗಳು ಅಥವಾ ಇತರೆ ಭಯೋತ್ಪಾದನಾ ಸಂಘಟನೆಗಳಗೆ ಸಂಬಂಧಿಸಿದವರು ಸೇರಿದ್ದಾರೆ. ಅಪಹರಣ, ಚಿತ್ರಹಿಂಸೆ, ಅತ್ಯಾಚಾರ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮತ್ತು ಅರಮನೆಗೆ ಬಾಂಬ್‌ಗಳನ್ನು ಎಸೆದಂತಹ ಅಪರಾಧ ಪ್ರಕರಣಗಳ ತಪ್ಪಿತಸ್ಥರನ್ನು ಕೂಡ ಮರಣದಂಡನೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಒಂದೇ ದಿನ 81 ಮಂದಿಯನ್ನು ಮರದಂಡನೆಗೆ ಒಳಪಡಿಸಿದ್ದು ಸೌದಿ ಅರೇಬಿಯಾದಲ್ಲಿ ದಾಖಲೆಯಾಗಿದೆ. ಶಿಕ್ಷೆಗೆ ಒಳಗಾದವರಲ್ಲಿ 73 ಸೌದಿ ಪ್ರಜೆಗಳು, ಏಳು ಮಂದಿ ಯೆಮನ್ ಪ್ರಜೆಗಳು ಹಾಗೂ ಒಬ್ಬ ಸಿರಿಯಾ ಪ್ರಜೆ ಸೇರಿದ್ದಾರೆ. ಶಿಕ್ಷೆಗೆ ಒಳಗಾದ ಎಲ್ಲ ಅಪರಾಧಿಗಳನ್ನೂ ಸೌದಿಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರತಿ ಆರೋಪಿಗಳಿಗೂ ಮೂರು ಪ್ರತ್ಯೇಕ ಹಂತಗಳಲ್ಲಿ ವಿಚಾರಣೆ ನಡೆದಿದ್ದು, 13 ನ್ಯಾಯಾಧೀಶರು ವಿಚಾರಣೆಯನ್ನು ನಡೆಸಿದ್ದಾರೆ.
PublicNext
13/03/2022 08:41 am