ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಜರಾತ್ ಹೈಕೋರ್ಟ್‌ನಲ್ಲಿ ಕನ್ನಡ ಮಾತಾಡಿದ ಮುಖ್ಯ ನ್ಯಾಯಮೂರ್ತಿ- ಕಕ್ಷಿದಾರ ಕಕ್ಕಾಬಿಕ್ಕಿ

ಅಹಮದಾಬಾದ್: ಗುಜರಾತ್ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳು ಕನ್ನಡದಲ್ಲಿ ಮಾತನಾಡಿದ ಪ್ರಸಂಗ ನಡೆದಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೈಕೋರ್ಟ್‌ ಸೇರಿದಂತೆ ಎಲ್ಲಾ ನ್ಯಾಯಾಲಯಗಳಲ್ಲಿಯೂ ಆಯಾ ರಾಜ್ಯಗಳ ಭಾಷೆಗಳನ್ನೇ ಕಡ್ಡಾಯ ಮಾಡಬೇಕು ಎಂದು ಕೆಲ ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ. ಆದರೆ ಬೇರೆ ಬೇರೆ ರಾಜ್ಯಗಳಿಂದ ಸ್ಥಳೀಯ ನ್ಯಾಯಮೂರ್ತಿಗಳು ನೇಮಕಗೊಳ್ಳುವ ಕಾರಣದಿಂದಾಗಿ ಹೈಕೋರ್ಟ್‌, ಸುಪ್ರೀಂಕೋರ್ಟ್‌ಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಇಂಗ್ಲಿಷ್‌ ಬಳಕೆ ಮಾಡಲಾಗುತ್ತಿದೆ. ಇಂಥ ಸ್ಥಿತಿಯ ನಡುವೆಯೂ ಗುಜರಾತ್‌ ಮುಖ್ಯ ನ್ಯಾಯಮೂರ್ತಿಗಳು ಕನ್ನಡ ಭಾಷೆ ಬಳಸಿದ್ದು, ಇದೀಗ ಭಾರಿ ಸುದ್ದಿಯಾಗಿದೆ.

ಇದಕ್ಕೆ ಕಾರಣ ಇಷ್ಟೇ. ಗುಜರಾತ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌ ಅವರು ಕರ್ನಾಟಕದವರು. ಅಂದಹಾಗೆ ಅರವಿಂದ್ ಕುಮಾರ್ ಅವರು ಕಳೆದ ಅಕ್ಟೋಬರ್ 13 ರಂದು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಆಗಿದ್ದೇನು?:

ಕೇಸ್‌ವೊಂದರ ವಿಚಾರಣೆ ವೇಳೆ ಕಕ್ಷಿದಾರನೊಬ್ಬರು ಖುದ್ದು ವಾದ ಮಂಡಿಸುತ್ತಿದ್ದರು. ಈ ಸಂದರ್ಭದಲ್ಲಿ ಆತ ಗುಜರಾತಿ ಭಾಷೆಯನ್ನು ಆಡಲು ಶುರು ಮಾಡಿದ್ದಾರೆ. ಅದರಿಂದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು, 'ನನಗೆ ಗುಜರಾತಿ ಭಾಷೆ ಅರ್ಥವಾಗುವುದಿಲ್ಲ. ಹೈಕೋರ್ಟ್ ನಿಯಮದಂತೆ ಇಂಗ್ಲಿಷ್‌ನಲ್ಲಿ ವಾದ ಮಂಡಿಸಿ' ಎಂದು ತಿಳಿಸಿದ್ದಾರೆ. ಆಗ ಕಕ್ಷಿದಾರ 'ಇದು ಗುಜರಾತ್. ಇದೇ ಮೊದಲ ಬಾರಿಗೆ ನಾನು ಹೈಕೋರ್ಟ್​ಗೆ ಬಂದಿರುವೆ, ಗುಜರಾತಿ ಭಾಷೆಯಲ್ಲಿಯೇ ವಾದ ಮಂಡಿಸುವೆ' ಎಂದರು.

ಈ ಮಾತಿನಿಂದ ಬೇಸರಗೊಂಡ ನ್ಯಾಯಮೂರ್ತಿ ಅರವಿಂದ ಕುಮಾರ್‌, 'ಸರಿ ಹಾಗಿದ್ದರೆ, ನಾನು ಕರ್ನಾಟಕದವ. ನಾನು ಕನ್ನಡದಲ್ಲಿ ಮಾತನಾಡುತ್ತೇನೆ. ನೀವು ಮಾತು ಮುಂದುವರೆಸಿ' ಎಂದು ಕನ್ನಡದಲ್ಲಿಯೇ ಹೇಳಿದರು. ಆಗ ಕಕ್ಷಿದಾರ ಕಕ್ಕಾಬಿಕ್ಕಿಯಾಗಿ 'ನನಗೆ ಕನ್ನಡ ಬರುವುದಿಲ್ಲ' ಎಂದರು.

ಆಗ ನ್ಯಾ.ಅರವಿಂದ ಕುಮಾರ್‌ ಅವರು, 'ಇದು ಹೈಕೋರ್ಟ್‌, ಅಧೀನ ಕೋರ್ಟ್‌ ಅಲ್ಲ. ಇಲ್ಲಿ ಏನಿದ್ದರೂ ಇಂಗ್ಲಿಷ್‌ನಲ್ಲಿಯೇ ವಾದ ಮಂಡನೆ ಮಾಡಬೇಕು' ಎಂದು ತಿಳಿಸಿದರು. ನಂತರ ಕೋರ್ಟ್‌ ಕಲಾಪ ಮುಂದುವರೆಯಿತು.

Edited By : Vijay Kumar
PublicNext

PublicNext

10/01/2022 03:45 pm

Cinque Terre

34.7 K

Cinque Terre

2