ಜಿಲ್ಲೆಯ ಕೆಜಿಎಫ್ ನಗರ ಚಿನ್ನ ಬೆಳೆಯುತ್ತಿದ್ದ ನೆಲ. ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಚಿನ್ನವನ್ನು ಕೊಟ್ಟಂತಹ ಇತಿಹಾಸವೇ ಇದೆ. ಆದರೆ ಚಿನ್ನ ಬರಿದಾಗಿ ಎರಡು ದಶಕಗಳೇ ಕಳೆದಿವೆ. ಇದರಿಂದ ಸಾವಿರಾರು ಮಂದಿ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಸರ್ಕಾರಗಳು ನಾನಾ ಯೋಜನೆಗಳನ್ನ ಜಾರಿ ಮಾಡುವ ಭರವಸೆಗಳನ್ನ ನೀಡುತ್ತಾ ಕಣ್ಣೊರೆಸುವ ತಂತ್ರ ಮಾಡಿಕೊಂಡು ಬಂದಿವೆ. ಆದರೆ ಇದುವರೆಗೂ ಕೆಜಿಎಫ್ ಗಣಿ ಪುನಾರಂಭ ಆಗಲಿಲ್ಲ.
ಸದ್ಯ ಸರ್ಕಾರ ಚಿನ್ನದ ಗಣಿ ಮತ್ತೆ ಓಪನ್ ಮಾಡಲು ಮುಂದಾಗಿದೆ, ಈಗಾಗಲೇ ಚಿನ್ನದ ಗಣಿಯ ಭೂಮಿ ಹಾಗೂ ಮಣ್ಣಿನ ಪರೀಕ್ಷೆಗಳು ನಡೆಯುತ್ತಿದ್ದು, ಚಿನ್ನದ ನಾಡಿನ ಗತ ವೈಭವ ಮತ್ತೆ ಮರುಕಳಿಸುತ್ತಾ ಅನ್ನೋ ನಿರೀಕ್ಷೆ ಗರಿಗೆದರಿವೆ.
ಚಿನ್ನದ ನಿಕ್ಷೇಪಗಳು ಎಲ್ಲೆಲ್ಲಿ ಇದೆ, ಅದರಲ್ಲಿ ಚಿನ್ನದ ಸಾಂದ್ರತೆ ಎಷ್ಟಿದೆ ಅನ್ನೋದನ್ನು ಪರೀಕ್ಷೆ ನಡೆಸಿದ್ದ ಗಣಿ ಇಲಾಖೆ ಈಗ ಮತ್ತೆ ಚಿನ್ನವನ್ನು ಬೇರ್ಪಡಿಸಿ ಹಾಕಲಾಗಿದ್ದ ಸೈನೈಡ್ ಗುಡ್ಡಗಳಲ್ಲಿ ಚಿನ್ನದ ಅಂಶ ಎಷ್ಟಿದೆ ಅನ್ನೋದನ್ನ ಪರೀಕ್ಷೆ ನಡೆಸಲು ಮುಂದಾಗಿದೆ.
ಮೂರನೇ ಹಂತದ ಸೈನೈಡ್ ಗುಡ್ಡದ ಮಣ್ಣನ್ನು ಹೈದರಾಬಾದ್‍ನಲ್ಲಿ ರಾಷ್ಟ್ರೀಯ ಮಣ್ಣು ಮತ್ತು ಖನಿಜ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಕೆಜಿಎಫ್ ಭೂಮಿಯ ಮಣ್ಣಿನಲ್ಲಿ ಇರುವ ಖನಿಜದ ಅಂಶ ಹಾಗೂ ಚಿನ್ನದ ಅಂಶ ಎಷ್ಟಿದೆ ಅನ್ನೋದರ ಬಗ್ಗೆ ಪರೀಕ್ಷೆ ನಡೆಸಿ 6 ತಿಂಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೂಡಾ ಕೆಜಿಎಫ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಪಸ್ಸಾಗಿದ್ದಾರೆ, ಒಂದು ವೇಳೆ ಚಿನ್ನದ ನಿಕ್ಷೇಪ ವಿರುವುದು ಖಚಿತವಾದರೆ ಚಿನ್ನದ ಗಣಿ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಸದ್ಯ ಶೀಘ್ರದಲ್ಲಿಯೇ ಕೆಜಿಎಫ್ ನಗರ ಮತ್ತೆ ಹಿಂದಿನ ಗತವೈಭವಕ್ಕೆ ಮರಳುತ್ತದೆ ಅನ್ನೋದು ಸಾವಿರಾರು ಗಣಿ ಕಾರ್ಮಿಕರು ಹಾಗೂ ಕುಟುಂಬಗಳ ನಿರೀಕ್ಷೆಯಾಗಿದೆ. 2 ದಶಕಗಳ ನಂತರ ಈಗ ಮತ್ತೆ ಕೆಜಿಎಫ್‍ನಲ್ಲಿ ಚಿನ್ನದ ನೆಲದ ಗತವೈಭವ ಮರುಕಳಿಸುವ ಕುರಿತು ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿದೆ.
PublicNext
29/09/2020 09:17 am