ಚಂಡೀಗಡ: ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಹಂದಿಗೆ ಪಟಿಯಾಲ ನ್ಯಾಯಾಲಯ ಗುರುವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ದಲೇರ್ ಮೆಹಂದಿ ದೋಷಿ ಎಂದು ಸಾಬೀತಾಗಿದ್ದು, ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 2003ರಲ್ಲಿ ದಲೇರ್ ಮೆಹಂದಿ ಮತ್ತು ಆತನ ಸಹೋದರ ಶಂಷೇರ್ ಸಿಂಗ್ ವಿರುದ್ಧ ಒಟ್ಟು 31 ಪ್ರಕರಣಗಳು ದಾಖಲಾಗಿತ್ತು. ನ್ಯಾಯಾಲಯದಲ್ಲಿ ಹಾಜರಾಗಿದ್ದ ಮೆಹಂದಿಯನ್ನು ಅಲ್ಲಿಂದಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ದಲೇರ್ ಮೆಹಂದಿ ಮತ್ತು ಆತನ ಸಹೋದರ ಶಂಷೇರ್ ಸಿಂಗ್ ತಮ್ಮ ತಂಡದ ಜನರು ಎಂದು ಹೇಳಿ ಅಕ್ರಮವಾಗಿ ಜನರನ್ನು ವಿದೇಶಕ್ಕೆ ಕರೆದೊಯ್ಯುತ್ತಿದ್ದರು. ಇದಕ್ಕಾಗಿ ಅವರು ಭಾರೀ ಹಣವನ್ನೂ ಪಡೆಯುತ್ತಿದ್ದರು. 2018ರಲ್ಲಿ ಜ್ಯುಡಿಷಿಯಲ್ ಮೆಜಿಸ್ಟ್ರೇಟ್ ಫಸ್ಟ್ ಕ್ಲಾಸ್ ಕೋರ್ಟ್ ಇವರಿಬ್ಬರನ್ನು ದೋಷಿ ಎಂದು ಹೇಳಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ನಂತರ ಜಾಮೀನು ಪಡೆದು ಹೊರಬಂದ ಇವರು ಸೆಷನ್ಸ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಗುರುವಾರ ಅಡಿಷನಲ್ ಸೆಷನ್ಸ್ ನ್ಯಾಯಮೂರ್ತಿ ಎಚ್ಎಸ್ ಗ್ರೆವಾಲ್ ಜಾಮೀನು ಅರ್ಜಿಯನ್ನು ತಳ್ಳಿದ್ದು ಮೆಹಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
PublicNext
14/07/2022 06:53 pm