ಕೋಲಾರ : ಕಾರ್ಮಿಕ ಸಂಘಟನೆಗಳು, ಸಾರ್ವಜನಿಕರು, ಉದ್ಯೋಗದಾತರು ಹಾಗೂ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವ ಸಂಘಟನೆಯ ಪದಾಧಿಕಾರಿಗಳಿಗೆ ಯೋಜನೆ ಮತ್ತು ಕಾನೂನು ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆಯಿಂದ ಏರ್ಪಡಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷಾರವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಉದ್ಯೋಗಿಗಳ ರಾಜ್ಯ ವಿಮಾ ನಿಗಮ, ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಡಳಿತ ಆಡಿಟೋರಿಯಂ ಭವನದಲ್ಲಿ ಹಮ್ಮಿಕೊಂಡಿದ್ದ, ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆ/ಕಾನೂನುಗಳ ಅರಿವು ಹಾಗೂ ಅಭಿಪ್ರಾಯ ಸಂಗ್ರಹ ಸಂಬಂಧಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕರ ಕೌಶಲ್ಯವನ್ನು ಹೆಚ್ಚಿಸಲು ಹಲವಾರು ಕಾನೂನು ಹಾಗೂ ನಿಯಮಗಳನ್ನು ಜಾರಿಗೆ ಮಾಡಲಾಗಿದೆ. ಈ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ರೂಪಿಸಿದರೆ ಮಾತ್ರ ಜನರಲ್ಲಿ ಜಾಗೃತಿ ಮೂಡುತ್ತದೆ ಎಂದರು.
ಕೊರೋನ ಸಂದರ್ಭದಲ್ಲಿ ಕಾರ್ಮಿಕರು ತುಂಬಾ ಸಮಸ್ಯೆಗಳನ್ನು ಎದುರಿಸಿದ ಘಟನೆಗಳನ್ನು ನೆನೆಯುತ್ತಾ ಆ ಸಮಯದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭವನ್ನು ನೆನಪಿಸಿಕೊಂಡರು. ಸುಮಾರು 5 ಲಕ್ಷ ಬೇರೆ ರಾಜ್ಯದ ಉದ್ಯೋಗಿಗಳಿಗೆ ಆಹಾರ ಹಾಗೂ ತಮ್ಮ ತಮ್ಮ ಊರುಗಳಿಗೆ ಹೋಗಲು ರೈಲು ಸಂಚಾರ ಒದಗಿಸಿದ್ದೆವು ಎಂದರು. ಕಾರ್ಮಿಕರಿಗೆ ಸಂಬಳ ಕೊಡಿಸುವುದರಲ್ಲಿ ಅವರ ಹಿತರಕ್ಷಣೆಯನ್ನು ಕಾಪಾಡುವುದರಲ್ಲಿ ಕಾರ್ಮಿಕ ಅಧಿಕಾರಿಗಳು ಹಿಂಜರಿಯುವುದಿಲ್ಲ ಹಾಗೂ ಹಲವಾರು ಸ್ಕಾಲರ್ಶಿಪ್ ನೀಡುತ್ತಿದ್ದು, ಕಾರ್ಮಿಕ ಮಕ್ಕಳು ಕಾರ್ಮಿಕರಾಗಬಾರದು ಎಂದರು.
Kshetra Samachara
05/10/2024 07:59 pm