ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಬಲಮುರಿ ಜಾತ್ರೋತ್ಸವ ಸಂಭ್ರಮದಲ್ಲಿ ನದಿಗೆ ಬಿದ್ದ ಭಕ್ತ.!

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಇತಿಹಾಸ ಪ್ರಸಿದ್ಧ ಬಲಮುರಿಯ ಶ್ರೀ ಆಗಸ್ತೇಶ್ವರ ದೇವಾಲಯದ ಕಾವೇರಿ ಜಾತ್ರೆಗೆ ತೆರಳಿದ್ದ ಭಕ್ತರೊಬ್ಬರು ಕಾವೇರಿ ಆರತಿ ಆಗುತ್ತಿರುವ ಸಂದರ್ಭದಲ್ಲಿ ಕಿರುಸೇತುವೆ ಮೇಲಿಂದ ಆಕಸ್ಮಿಕವಾಗಿ ನದಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ಜರುಗಿದೆ.

ಆಯ ತಪ್ಪಿ ನದಿಗೆ ಬಿದ್ದ ಕಬಡಗೇರಿಯ ವಾಸು ಎಂಬುವರನ್ನು ಸ್ಥಳೀಯರು ಹರಸಾಹಸದಿಂದ ರಕ್ಷಿಸಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಅಪಾಯಕಾರಿಯಾಗಿರುವ ಬಲಮುರಿಯ ಹಳೇ ಸೇತುವೆ ಮಳೆಗಾಲದಲ್ಲಿ ಸಂಪೂರ್ಣ ಮುಳುಗಡೆಯಾಗುತ್ತದೆ. ಸೇತುವೆಗೆ ಯಾವುದೇ ರಕ್ಷಣಾ ಬೇಲಿ ಇಲ್ಲದಿರುವುದರಿಂದ ಮಳೆಯ ದಿನಗಳಲ್ಲಿ ಕಾಲ್ನಡಿಗೆ ಅಪಾಯಕಾರಿ. ಅಲ್ಲೇ ಸಮೀಪದಲ್ಲಿ ಕೆಳಗಡೆ ಕಾವೇರಿ ಆರತಿ ಆಗುತ್ತಿರುವ ಸಂದರ್ಭದಲ್ಲಿ ಈ ಸೇತುವೆ ಮೇಲೆ ವಾಸು ನಡೆದು ಬರುತ್ತಿದ್ದರು. ಇದೇ ವೇಳೆ ವಾಹನವೊಂದು ಬಂದಿದ್ದರಿಂದ ಸೇತುವೆ ಅಂಚಿಗೆ ಬಂದು ಆಯತಪ್ಪಿದ ವಾಸು, ನದಿಗೆ ಬಿದ್ದಿದ್ದಾರೆ. ಈಗಷ್ಟೇ ಮಳೆ ನಿಂತ ಹಿನ್ನೆಲೆಯಲ್ಲಿ ನದಿಯಲ್ಲಿ ಭಾರೀ ಪ್ರಮಾಣದ ನೀರಿತ್ತು. ನದಿಗೆ ಬಿದ್ದ ವಾಸು ಜೀವನ್ಮರಣದ ನಡುವೆ ತೇಲಿ ಹೋಗುತ್ತಿದ್ದುದನ್ನು ಗಮನಿಸಿದ ಜನಸ್ತೋಮ ಸಹಾಯಕ್ಕಾಗಿ ಕಿರುಚಿಕೊಂಡಿದ್ದರು. ಇದೇ ವೇಳೆ ಸ್ಥಳೀಯ ನಿವಾಸಿ ಈಜು ಪರಿಣಿತ ಚಾಲಕ ಎಂ ಆರ್ ಬಿಪಿನ್ ಎಂಬವರು ಧೈರ್ಯ ಮಾಡಿ ನದಿಗೆ ಹಾರಿ ವಾಸು ಜೀವರಕ್ಷಣೆಗೆ ಪ್ರಯತ್ನಿಸಿ ಅದಾಗಲೇ ನದಿಯಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ವಾಸುವಿನ ಕೂದಲು ಹಿಡಿದು ತೀರಕ್ಕೆ ಎಳೆದುತಂದಿದ್ದಾರೆ.

ನೆರೆದಿದ್ದವರ ಸಹಕಾರದಿಂದ ಅಂಗಾತ ಮಲಗಿಸಿ ಹೊಟ್ಟಯಲ್ಲಿದ್ದ ನೀರನ್ನು ಹೊರತೆಗೆಯಲಾಯ್ತು. ನಂತರ ಸ್ಥಳದಲ್ಲಿ ಇದ್ದ ಪೊಲೀಸರು ಚೇತರಿಸಿಕೊಂಡ ಅವರ ಸಂಬಂಧಿಕರಿಗೆ ವಿಷಯವನ್ನು ತಿಳಿಸಿದ ಬಳಿಕ ಮನೆಗೆ ಕಳುಹಿಸಲಾಯಿತು. ಈ ಸಂದರ್ಭ ಅವರ ಸಮಯಪ್ರಜ್ಞೆ ಮತ್ತು ಜೀವ ರಕ್ಷಣೆ ಸಾಹಸದ ಬಗ್ಗೆ ನೆರೆದ ಜನಸ್ತೋಮ ಮೆಚ್ಚುಗೆ ವ್ಯಕ್ತಪಡಿಸಿ ಕೊಂಡಾಡಿದರು.

Edited By : Manjunath H D
PublicNext

PublicNext

18/10/2024 08:33 pm

Cinque Terre

26.35 K

Cinque Terre

0