ನವದೆಹಲಿ: ಯಾವುದೇ ಕಾರಣಕ್ಕೂ ಅಗ್ನಿಪಥ್ ಯೋಜನೆ ಹಿಂಪಡೆಯೋ ಮಾತೇ ಇಲ್ಲ ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ತಿಳಿಸಿದ್ದಾರೆ.
'ಅಗ್ನಿಪಥ' ಯೋಜನೆಯ ವಿರುದ್ಧ ಭಾರಿ ಪ್ರತಿಭಟನೆಗಳ ನಡುವೆ ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರು ಸೇನಾ ಮುಖ್ಯಸ್ಥರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸಭೆಯ ಬಳಿಕ ಸೇನಾ ನಾಯಕರು ಯೋಜನೆಯ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, 'ಜೂನ್ 24ರಂದು ಅಗ್ನಿಪಥ್ ಯೋಜನೆಗೆ ಅಧಿಸೂಚನೆ ನೀಡಿದ್ದು, ಡಿಸೆಂಬರ್ ಮೊದಲ ವಾರದ ವೇಳೆಗೆ ನೇಮಕಾತಿ ಶುರುವಾಗಲಿದೆ. ಡಿಸೆಂಬರ್ 30ರಿಂದ ಮೊದಲ ಬ್ಯಾಚ್ ಸೇವೆ ಆರಂಭವಾಗಲಿದೆ. ಫೆಬ್ರವರಿ 2023ಕ್ಕೆ 2ನೇ ಬ್ಯಾಚ್ ನೇಮಕಾತಿ ಶುರುವಾಗಲಿದೆ. ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದರೆ 1 ಕೋಟಿ ಪರಿಹಾರ ನೀಡಲಾಗುವುದು. ಮುಂದಿನ 4-5 ವರ್ಷದಲ್ಲಿ 50-60 ಸಾವಿರ ವೇತನವಾಗಲಿದೆ. ಮುಂದಿನ ದಿನಗಳಲ್ಲಿ 90 ಸಾವಿರದಿಂದ 1.25 ಲಕ್ಷ ವೇತನ ಸಿಗಲಿದೆ. ಸೇನೆಗೆ ನೇಮಕಗೊಳ್ಳುವರಿಗೆ ಯಾವುದೇ ತಾರತಮ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಅಗ್ನಿವೀರರಿಗೆ ರಕ್ಷಣಾ ಸಚಿವಾಲಯದ ನೇಮಕಾತಿಯಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡಲಾಗುವುದು. ಅಗ್ನಿಪಥ್ ಯೋಜನೆಯನ್ನು ಏಕಾಏಕಿ ಜಾರಿಗೊಳಿಸಿಲ್ಲ. 1989ರಿಂದಲೂ ಅಗ್ನಿಪಥ್ ಯೋಜನೆ ಜಾರಿ ಬಗ್ಗೆ ಚರ್ಚೆ ನಡೆದಿತ್ತು. ಯೋಜನೆ ಬಗ್ಗೆ ಹಲವು ದೇಶಗಳಲ್ಲಿ ಅಧ್ಯಯನ ನಡೆಸಿ ಜಾರಿ ಮಾಡಲಾಗಿದೆ. ಮೂರು ಸೇನಾಪಡೆಗಳಿಗೆ ಯುವಕರ ನೇಮಕಾತಿ ಅಗತ್ಯವಿದೆ ಎಂದು ದೆಹಲಿಯಲ್ಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ತಿಳಿಸಿದ್ದಾರೆ.
PublicNext
19/06/2022 04:36 pm