ಗದಗ: ಸರಕಾರ ಮಹಿಳಾ ಮತ್ತು ಮಕ್ಕಳ ಇಲಾಖೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳನ್ನು ಶಾಲಾ ಪೂರ್ವ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಆದರೆ ಅವುಗಳು ಮೂಲ ಸೌಕರ್ಯ ವಂಚಿತವಾಗಿದೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ ಇನ್ನೂ ಕೆಲವು ಅಂಗನವಾಡಿಗಳು ದೇವಸ್ಥಾನದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 24 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ ಕೇವಲ 6 ಅಂಗನವಾಡಿ ಕೇಂದ್ರಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. ಅಂಗನವಾಡಿ ಸಂಖ್ಯೆ 47, 48, 50, 53, 55, 145 ಗಳಿಗೆ ಸ್ವಂತ ಕಟ್ಟಡ ಇವೆ. ಆದರೆ ಇನ್ನುಳಿದ 18 ಅಂಗನವಾಡಿಗಳು ಬಾಡಿಗೆ ಮನೆ ಹಾಗೂ ದೇವಸ್ಥಾನ, ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತವೆ, ಇದು ಪಟ್ಟಣದಲ್ಲಿ ಮಾತ್ರವಲ್ಲ ತಾಲೂಕಿನಲ್ಲಿ ಇದೇ ರೀತಿ ಇದೆ.
ಮಹಿಳಾ ಮತ್ತು ಮಕ್ಕಳ ಇಲಾಖೆ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಒಟ್ಟು 119 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 94 ಮಾತ್ರ ಸ್ವಂತ ಕಟ್ಟಡಗಳನ್ನು ಹೊಂದಿವೆ. ಅಂಗನವಾಡಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಇಲ್ಲ. ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿದ್ದಾರೆಯೋ ಇಲ್ಲವೋ ಎಂಬುದು ತಿಳಿಯದಂತಾಗಿದೆ. ಅಂಗನವಾಡಿ ಮಕ್ಕಳನ್ನು ಬಾಡಿಗೆ ಮನೆಗಳಲ್ಲಿ ಕಲಿಸುತ್ತಿರುವ ದೃಷ್ಯ ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ಸರಕಾರ ಪ್ರಸಕ್ತ ವರ್ಷದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಅನುಮತಿ ನೀಡಲಾಗಿದೆ. ಇದರಿಂದ ಅಂಗನವಾಡಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಕೆಲವು ಕಡೆ ಅಂಗನವಾಡಿಗಳು ಮುಚ್ಚುವ ಹಂತದಲ್ಲಿವೆ.
PublicNext
18/08/2022 12:41 pm