ಸುರಪುರ: ತಾಲೂಕಿನ ಕಿರದಳ್ಳಿ ಗ್ರಾಮಕ್ಕೆ ಸುರಪುರದಿಂದ ಸರ್ಕಾರಿ ಬಸ್ ಸಂಚಾರವಿಲ್ಲದ ಕಾರಣ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಗ್ರಾಮಕ್ಕೆ ಬಸ್ ಸೇವೆ ಒದಗಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸುರಪುರ ಘಟಕ ವ್ಯವಸ್ಥಾಪಕರಿಗೆ ಬಿಜೆಪಿ ಯುವ ಮೋರ್ಚಾದಿಂದ ಇಂದು ಮನವಿ ಸಲ್ಲಿಸಲಾಯಿತು.
ಇದೆ ವೇಳೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಸುರಪುರ ತಾಲ್ಲೂಕು ಅಧ್ಯಕ್ಷ ಶ್ರವಣಕುಮಾರ ನಾಯಕ ಅವರು, ಸುರಪುರದಿಂದ ಕಿರದಳ್ಳಿ ಗ್ರಾಮವು ಸುಮಾರು 30 ಕಿಲೋಮೀಟರ್ ದೂರದಲ್ಲಿದ್ದು, ದಿನನಿತ್ಯ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ ಅಲ್ಲದೇ ರೈತರು ತಮ್ಮ ಕಚೇರಿ ಕೆಲಸಕ್ಕೆ ಬಂದು ಹೋಗುತ್ತಾರೆ ಇವರಿಗೆ ಸರಿಯಾದ ಬಸ್ ಸಂಚಾರವಿಲ್ಲ ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದರು.
ಇನ್ನು ಕಿರದಳ್ಳಿ ಗ್ರಾಮದಿಂದ ಸುರಪುರ ಪಟ್ಟಣಕ್ಕೆ ಬೆಳಗ್ಗೆ 7: 10 ನಿಮಿಷಕ್ಕೆ, ಮಧ್ಯಾಹ್ನ 1: 30ಕ್ಕೆ ಸಾಯಂಕಾಲ 6 ಗಂಟೆಗೆ ಸಮಯಕ್ಕನುಸಾರವಾಗಿ ಸರಕಾರಿ ಬಸ್ ಸಂಚರಿಸಬೇಕು ಎಂದು ಹೇಳಿದರು.ಒಂದು ವೇಳೆ ಕಿರದಳ್ಳಿ ಗ್ರಾಮದಿಂದ ಸುರಪುರ ಪಟ್ಟಣಕ್ಕೆ ಯಾವುದೇ ಸರಕಾರಿ ಬಸ್ ಸೌಕರ್ಯ ಒದಗಿಸದಿದ್ದಲ್ಲಿ ನಮ್ಮ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಉಪಾಧ್ಯಕ್ಷ ರಾಮನಗೌಡ ಬೈಲಾಪುರ, ಪ್ರಧಾನ ಕಾರ್ಯದರ್ಶಿ ಕೃಷ್ಣ ಮಂಗಿಹಾಳ, ಕಾರ್ಯದರ್ಶಿ ಶ್ರೀಕಾಂತ ಕಚಕನೂರು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಇದ್ದರು.
PublicNext
05/01/2022 05:35 pm