ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಹುಬ್ಬಳ್ಳಿ: ಸ್ಮಾರ್ಟಸಿಟಿ ಯೋಜನೆ ನೆಪದಲ್ಲಿ ಹಾಳುಗೆಡವಿದ ಅವಳಿನಗರದ ರಸ್ತೆಗಳು ವಾಹನ ಸವಾರರಗೆ ಶಾಪವಾಗಿವೆ. ಯಾವುದೆ ಒಂದೇ ಒಂದು ರಸ್ತೆ ಸರಿಯಾಗಿ ಉಳಿದಿಲ್ಲ. ಗಟಾರು ನಿರ್ಮಾಣಕ್ಕಾಗಿ ಫುಟ್ ಪಾಥ್, ಬಸ್ ಸ್ಟಾಪುಗಳು ಮಟಾಶ್.
ಆಮೆ ವೇಗವನ್ನೂ ನಾಚಿಸುವಂತೆ ನಡೆದಿವೆ ಬೃಹತ್ ಕಾಮಗಾರಿಗಳು. ಕೋರ್ಟ್ ಸರ್ಕಲ್ ಮುಚ್ಚಿ ತಿಂಗಳುಗಳೇ ಕಳೆದಿವೆ. ಜನತಾಬಜಾರ್, ಹಳೆ ಸೆಂಟ್ರೆಲ್ ಬಸ್ ನಿಲ್ದಾಣ ಕಾಮಗಾರಿ ಎಂದು ಮುಗಿಯುತ್ತವೋ ಎಂಬುದು ನಮ್ಮ ಶಾಸಕರಾದ ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ್, ಪ್ರಸಾದ್ ಅಬ್ಬಯ್ಯ ಹಾಗೂ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಅವರಿಗೂ ಗೊತ್ತಿಲ್ಲ.
ಏಕೆಂದರೆ ಅವರೆಲ್ಲ ಅವಳಿನಗರದ ರಸ್ತೆಯಲ್ಲಿ ಓಡಾಡಿದರೆ ತಾನೆ ಗೊತ್ತಾಗುವುದು. ಅವರು ಹೋಗಲಿ " ವಾರದಗ ಎರ್ಡ ಸಲ ಬಂದ ಹೋಗಾವಾ " ಎಂಬಂತೆ ಇಲ್ಲೆ ಸುಳಿದಾಡುವ ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಇವು ಕಾಣುತ್ತಿಲ್ಲವೆ?
ನೋಡಿ, ನಮ್ಮ ಶಾಸಕರು ಇಲ್ಲಿ ಅಧಿಕಾರಿಗಳ ಕ್ಲಾಸ್ ತೆಗೆದುಕೊಳ್ಳೊದಿಲ್ಲ. ಇನ್ನು ಹತ್ತಿರದ ಬೆಳಗಾವಿಯಲ್ಲಿ ನಡೆದ ಅಧಿವೇಶನದಾಗಾದ್ರೂ ಇಲ್ಲಿಯ ದುಸ್ಥಿತಿ ಬಗ್ಗೆ ಪ್ರಸ್ತಾಪ ಮಾಡಿ ಚರ್ಚಿಸಬಹುದಿತ್ತಲ್ಲ? ಅದನ್ನ ಕೇಳಿಯಾದ್ರೂ ಇಲ್ಲಿ ನಿಮಗ ಓಟ್ ಹಾಕಿದ ನಾವು ಖುಷಿ ಪಡ್ತಿದ್ವಿ.
ಅಧಿವೇಶನ ಹೋಗ್ಲಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಗಾಗ ನಡೆಯುವ ನಡೆಯುವ ಸಭೆಗಳಲ್ಲಾದರೂ ವಿಳಂಬಕ್ಕೆ ಕಾರಣಗಳೇನು ಎಂದು ತಿಳಿದುಕೊಳ್ಳದಿರುವುದು ಆಶ್ಚರ್ಯ ತಂದಿದೆ. .
ಈಗ ನೋಡಿ " ಸ್ಮಾರ್ಟಸಿಟಿ ಯೋಜನೆಯಡಿ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಅನಗತ್ಯ ವಿಳಂಬ ಮಾಡುತ್ತಿದ್ದು, ಇಲಾಖಾ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ '' ಎಂದು ಶಾಸಕ ಪ್ರಸಾದ ಅಬ್ಬಯ್ಯ ಬೆಳಗಾವಿ ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ನೋಡಿದರೆ, ಕೊನೆಗೆ ಒಬ್ಬರಾದರೂ ಎಚ್ಚೆತ್ತು ಕೊಂಡಿದ್ದಾರಲ್ಲಾ ಎಂದು ಸಂತಸವಾಗುತ್ತದೆ.
ಶಾಸಕ ಅಬ್ಯಯ್ಯ ಪ್ರಶ್ನೆಗೆ ಉತ್ತರಿಸಿದ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, 1ನೇ ಹಂತದಲ್ಲಿ ಒಟ್ಟು 60 ಕಾಮಗಾರಿ ಕೈಗೊಂಡಿದ್ದು, 2ನೇ ಹಂತದಲ್ಲಿ 3 ಕಾಮಗಾರಿ ಕೈಗೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ 299 ಕೋ.ರೂ. ಸೇರಿದಂತೆ ಒಟ್ಟು 598 ಕೋ.ರೂ. ಅನುದಾನ ಪೈಕಿ 415 ಕೋ.ರೂ. ಮೊತ್ತದ ಅನುದಾನವನ್ನು 2021ರ ನವೆಂಬರದಲ್ಲಿ ಪೂರ್ಣಗೊಳಿಸಿದ್ದು, ಉಳಿದ ಕಾಮಗಾರಿಗಳ ಪೂರ್ಣಾವಧಿಯನ್ನು ಜೂನ್ 2023ಕ್ಕೆ ವಿಸ್ತರಿಸಲಾಗಿದೆ. ಅಷ್ಟರೊಳಗಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ..
PublicNext
22/12/2021 06:15 pm