ತುಮಕೂರು : ಬೆಂಗಳೂರು-ತುಮಕೂರು ರೈಲು ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಮುಕ್ತಾಯಗೊಂಡಿದ್ದು, ಈ ಮಾರ್ಗದಲ್ಲಿ ಮೆಮು ರೈಲುಗಳನ್ನು ಓಡಿಸಲು ಇಲಾಖೆ ಚಿಂತನೆ ನಡೆಸಿದೆ. ಚಿಕ್ಕಬಣಾವರ-ಹುಬ್ಬಳ್ಳಿ ನಡುವಿನ ಮಾರ್ಗದ ವಿದ್ಯುದೀಕರಣ ಭಾಗವಾಗಿ ಬೆಂಗಳೂರು-ತುಮಕೂರು ನಡುವಿನ 69.47 ಕಿ. ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು, ರೈಲುಗಳ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ.
"ಕಾಮಗಾರಿ ಪೂರ್ಣಗೊಂಡ ಬಳಿಕ ಎಲೆಕ್ಟ್ರಿಕ್ ಲೋಕೋಮೋಟಿವ್ ಮೂಲಕ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ ದಾಖಲೆಗಳನ್ನು ಮಾಡಲಾಗುತ್ತಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಗೆ ದಾಖಲೆಗಳ ಮೂಲಕ ಪ್ರಸ್ತಾವನೆ ಸಲ್ಲಿಸಲಾಗುತ್ತದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಪರಿಶೀಲನೆ ನಡೆಸಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿದ ಬಳಿಕ ಮಾರ್ಗದಲ್ಲಿ ಮೆಮು ರೈಲುಗಳನ್ನು ಓಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ಹೇಳಿದ್ದಾರೆ. ಮೆಮು ರೈಲು ಸಂಚಾರ ಆರಂಭವಾದರೆ ಪ್ರತಿದಿನ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ. ಒಟ್ಟು 856.76 ಕೋಟಿ ಮೊತ್ತದಲ್ಲಿ ಚಿಕ್ಕಬಣಾವರ-ಹುಬ್ಬಳ್ಳಿ ರೈಲ್ವೆ ಮಾರ್ಗವನ್ನು ವಿದ್ಯುದೀಕರಣ ಮಾಡಲಾಗುತ್ತಿದೆ. ರೈಲ್ವೆ ವಿಕಾಸ ನಿಗಮ ಸೇರಿದಂತೆ ವಿವಿಧ ಸಂಸ್ಥೆಗಳು ವಿದ್ಯುದೀಕರಣ ಕಾಮಗಾರಿಯನ್ನು ಕೈಗೊಂಡಿವೆ.
2022ರ ಮಾರ್ಚ್ ವೇಳೆಗೆ ಬೀರೂರು-ಚಿಕ್ಕಜಾಜೂರು, ತುಮಕೂರು-ಕರಡಿ ಸೆಕ್ಷನ್ ವಿದ್ಯುದೀಕರಣ ಪೂರ್ಣಗೊಳ್ಳಲಿದೆ. ಚಿಕ್ಕಜಾಜೂರು-ಹುಬ್ಬಳ್ಳಿ ನಡುವಿನ ಕಾಮಗಾರಿ ನಡೆಯುತ್ತಿದೆ. 2022ರ ಡಿಸೆಂಬರ್ ವೇಳೆಗೆ ಎಲ್ಲಾ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.
PublicNext
01/10/2021 08:30 pm