ದಾವಣಗೆರೆ: ಅಭಿವೃದ್ಧಿ ಆಗಿಲ್ಲ, ಚುನಾವಣೆ ಟೈಂನಲ್ಲಿ ಬರ್ತಾರೆ. ಆಮೇಲೆ ಬರೋದಿಲ್ಲ ಎಂಬ ಮಾತು ಕೇಳಿ ಬರುತ್ತೆ. ಆದ್ರೆ, ಇಲ್ಲೊಬ್ಬರು ಜನಪ್ರತಿನಿಧಿ ವ್ಯಾಟ್ಟ್ಯಾಪ್ ಮೂಲಕ ಅಭಿವೃದ್ಧಿ ಕಾರ್ಯ ಮಾಡ್ತಿದ್ದಾರೆ. ಈ ಮೂಲಕ ಜನರ ಪ್ರೀತಿಗೂ ಪಾತ್ರರಾಗಿದ್ದಾರೆ.
ವಿನೂತನ ರೀತಿಯಲ್ಲಿ ಗ್ರಾಮದ ವಾರ್ಡ್ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವುದು ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮ ಪಂಚಾಯಿತಿ ಸದಸ್ಯೆ ಶಿಲ್ಲಾ ಮರುಳ ಸಿದ್ದೇಶ್. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಂತೇಬೆನ್ನೂರಿನ ನಾಲ್ಕನೇ ವಾರ್ಡ್ ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. ಆಗ ವಾರ್ಡ್ ಮಾದರಿ ಆಗಿಸುವುದೇ ನನ್ನ ಗುರಿ ಎಂಬ ವಚನವನ್ನು ಜನರಿಗೆ ನೀಡಿದ್ದರು.
ಜನರಿಗೆ ನೀಡಿದ ಭರವಸೆಯು ಭರವಸೆಯಾಗಿಯೇ ಉಳಿಯದೇ ಕಾಯಕಲ್ಪಕ್ಕೆ ಬರಬೇಕೆಂದು ಶಿಲ್ಪಾ ಪಣ ತೊಟ್ಟರು. ಇದಕ್ಕೆ ಪೂರಕವೆಂಬಂತೆ ಸಂತೇಬೆನ್ನೂರು ನಾಲ್ಕನೇ ವಾರ್ಡ್ ಎಂಬ ಗ್ರೂಪ್ ರಚಿಸಿಕೊಂಡು ಪ್ರತಿ ಮನೆಮನೆಯ ಸಂಕಷ್ಟ ಆಲಿಸುವ ಕೆಲಸ ಮಾಡುತ್ತಿದ್ದಾರೆ. ಸ್ವಲ್ಪ ಸಮಸ್ಯೆಯಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಸ್ಪಂದಿಸುವ ಕಾರ್ಯ ಮಾಡ್ತಿದ್ದಾರೆ.
ವಾರ್ಡ್ ನಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಫೋಟೋ ಸಮೇತ ಹಾಕುವಂತೆಯೂ ಮನವಿ ಮಾಡಿರುವ ಶಿಲ್ಪಾ ಅವರು, ಕಳೆದ ಒಂದು ತಿಂಗಳಿನಿಂದ ತಕ್ಷಣವೇ ಪರಿಹಾರ ಒದಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ಕುಡಿಯುವ ನೀರು, ಚರಂಡಿ ಸುವ್ಯವಸ್ಥೆ, ಸ್ವಚ್ಛತೆ, ವಿದ್ಯುತ್ ಸಂಪರ್ಕ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದಾರೆ. ಮನೆ ಮನೆಗೆ ತೆರಳಿ ಸಮಸ್ಯೆ ಆಲಿಸುತ್ತಿರುವುದು ಶಿಲ್ಪಾ ಅವರ ಕಾರ್ಯವೈಖರಿಯ ಮತ್ತೊಂದು ಸ್ಪೆಷಾಲಿಟಿ. ಒಟ್ಟಿನಲ್ಲಿ ಜನಪ್ರತಿನಿಧಿಗಳು ಈ ರೀತಿಯಾಗಿ ಸಮಸ್ಯೆ ಪರಿಹರಿಸಲು ಶ್ರಮಿಸಿದರೆ ಜನರಲ್ಲಿಯೂ ಆಯ್ಕೆ ಮಾಡಿದ್ದಕ್ಕೆ ಸಾರ್ಥಕ ಭಾವನೆ ಮೂಡುವುದಂತೂ ಸತ್ಯ ಅಲ್ವಾ.
PublicNext
16/02/2021 11:08 am