ವಿರುಪಾಪುರ: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕಕ್ಕುಪ್ಪಿ ಗ್ರಾಪಂ ವ್ಯಾಪ್ತಿಯ ವಿರುಪಾಪುರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ನೀರಿನ ಹಾಹಾಕಾರ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಳೆ, ನೀರು ಪೂರೈಕೆಯಾಗುತ್ತಿದ್ದ ಪೈಪ್ ಗಳು ಕತ್ತರಿಸಲ್ಪಟ್ಟಿವೆ. ಆಗಿನಿಂದ ಈವರೆಗೂ ತುಂಡಾಗಿರುವ ಪೈಪ್ ದುರಸ್ತಿಯಾಗಿಲ್ಲ. ಆದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದೆರಡು ವರ್ಷಗಳಿಂದಲೂ ದಿನವೊಂದಕ್ಕೆ ನಾಲ್ಕು ಕೊಡ ನೀರಿಗಾಗಿ ಪರದಾಡು ವಂತಾಗಿದೆ. ನಮ್ಮ ಗೋಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಆಲಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಇಡೀ ಗ್ರಾಮಕ್ಕೆ ಕೇವಲ ಎರಡೇ ಮಿನಿ ನೀರಿನ ಟ್ಯಾಂಕ್ ಇವೆ. ಅವುಗಳಿಗೆ ಸಾಕಷ್ಟು ನೀರು ಸಮರ್ಪಕವಾಗಿ ಪೂರೈಸಲಾಗುತ್ತಿಲ್ಲ. ಪರಿಣಾಮ ನಿತ್ಯ ನೀರಿಗಾಗಿ ದಿನಪೂರ್ತಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ.
ದಿನ ಬಳಕೆಗೆ ನೀರು ಬೇಕೆಂದರೂ ಮನೆಗೊಬ್ಬರು ಹಗಲಿರುಳು ಸರತಿ ಸಾಲಿನಲ್ಲಿರಬೇಕಾದ ಸ್ಥಿತಿ ಇದೆ ಎಂದು ದೂರಿದ್ದಾರೆ.
ಸಮಸ್ಯೆ ಕುರಿತು ಸಾಕಷ್ಟು ಬಾರಿ, ಗ್ರಾಪಂ- ತಾಪಂ ಅಧಿಕಾರಿಗೆ, ತಹಸೀಲ್ದಾರ್ ಗಮನಕ್ಕೆ ತರಲಾಗಿದ್ದು ಪ್ರಯೋಜನವಾಗಿಲ್ಲ.
ನೀರಿನ ಬವಣೆ ನೀಗಿಸಬೇಕಿದ್ದ ಇಲಾಖಾಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ.
ತಾಲೂಕು ಕೇಂದ್ರದಿಂದ ಅನತಿ ದೂರದಲ್ಲಿರುವ ಹಾಗೂ ರಾ.ಹೆ. 50ರಲ್ಲಿರುವ ವಿರುಪಾಪುರ ಗ್ರಾಮಕ್ಕೆ ಸೌಜನ್ಯಕ್ಕೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ ಆಕ್ರೋಶ ವ್ಯಕ್ತ ಪಡಿಸಿದ ಗ್ರಾಮಸ್ಥರು, ತಾಲೂಕಾಡಳಿತ ವಿಕಲಾಂಗವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇಲಾಖಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ವಾರದೊಳಗಾಗಿ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ಎಲ್ಲ ಸಂಘಟನೆಗಳು ಸೇರಿ ಕಕ್ಕುಪ್ಪಿ ಗ್ರಾಪಂಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ
PublicNext
03/01/2021 10:24 am