ಕಾರವಾರ: ಉಪ್ಪಿಗಿಂತ ರುಚಿ ಬೇರೆಯಿಲ್ಲ ಅನ್ನೋ ಮಾತಿದೆ. ಆದರೀಗ ಉಪ್ಪಿಗೆ ಪರ್ಯಾಯವನ್ನ ಹುಡುಕುವ ಪರಿಸ್ಥಿತಿ ಬಂದೊದಗಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಾಣಿಕಟ್ಟಾ ಸುತ್ತಮುತ್ತ 40 ಎಕರೆ ವಿಶಾಲ ಪ್ರದೇಶದಲ್ಲಿ ಬೆಳೆಯುತ್ತಿದ್ದ ಸಾವಿರಾರು ಕ್ವಿಂಟಲ್ ಉಪ್ಪಿನ ಇಳುವರಿಯಲ್ಲಿ ಈ ಬಾರಿ ಕುಸಿತ ಕಂಡಿದ್ದು, ಇದು ಮಾರುಕಟ್ಟೆಯಲ್ಲಿ ಉಪ್ಪಿನ ಕೊರತೆಗೆ ಕಾರಣವಾಗಿದೆ.
ನೈಸರ್ಗಿಕವಾದ ಅಯೋಡಿನ್- ಕಬ್ಬಿಣ ಅಂಶ ಹೊಂದಿರುವ ಉಪ್ಪನ್ನು ನಾಗರಬೈಲ್ ಉಪ್ಪು ಮಾಲೀಕರ ಸಹಕಾರ ಸಂಘದ ಮೂಲಕ ತಯಾರಿಸಲಾಗುತ್ತದೆ. ಇಲ್ಲಿ 1720ರಿಂದಲೂ ನಿರಂತರವಾಗಿ ಉಪ್ಪು ತಯಾರಿಸಲಾಗುತ್ತಿದ್ದು, ದಕ್ಷಿಣ ಭಾರತದಾದ್ಯಂತ ತನ್ನ ಮಾರುಕಟ್ಟೆಯನ್ನ ಈ ಸಾಣಿಕಟ್ಟಾ ಉಪ್ಪು ವ್ಯಾಪಿಸಿದೆ. ಆದರೆ, ಅಕಾಲಿಕ ಮಳೆ, ಚಂಡಮಾರುತ, ತಂಪಿನ ವಾತಾವರಣ ಉಪ್ಪಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದ್ದು, ಇದರ ಪರಿಣಾಮವಾಗಿ ಉಪ್ಪಿನ ಉತ್ಪಾದನೆಯಲ್ಲಿ ಈ ಬಾರಿ ಭಾರಿ ಕುಂಠಿತವಾಗಿದೆ.
ಸದ್ಯ ಉಪ್ಪು ತಯಾರಿಸುವ ಸಾಕಷ್ಟು ಕಂಪನಿಗಳು ಬಂದಿವೆ. ಹರಳು ಉಪ್ಪು, ಪುಡಿ ಉಪ್ಪು, ಕೆಂಪು ಉಪ್ಪು ಹೀಗೆ ವಿವಿಧ ಬಗೆಯ ಉಪ್ಪುಗಳನ್ನ ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಆದರೂ ಈ ಉಪ್ಪುಗಳು ಇಲ್ಲಿನ ಸಾಣಿಕಟ್ಟಾ ನೈಸರ್ಗಿಕ ಉಪ್ಪಿಗೆ ಸರಿಸಮಾನವಲ್ಲ. ಹೀಗಾಗಿ ಕೇವಲ ಉತ್ತರ ಕನ್ನಡ ಜಿಲ್ಲೆಯಲ್ಲಷ್ಟೇ ಅಲ್ಲದೇ ದಕ್ಷಿಣ ಭಾರತದಾದ್ಯಂತ ಸಾಣಿಕಟ್ಟಾ ಉಪ್ಪಿಗೆ ಭಾರೀ ಬೇಡಿಕೆ ಇದೆ. ಆದರೆ ಸದ್ಯ ಉಪ್ಪಿನ ಉತ್ಪಾದನೆ ಕುಂಠಿತವಾಗಿರುವುದರಿಂದ ಮಾರುಕಟ್ಟೆಗೆ ಸರಿಯಾಗಿ ಉಪ್ಪು ಪೂರೈಕೆಯಾಗದೆ ಉಪ್ಪಿನ ಕೊರತೆ ಎದುರಾಗಿದೆ.
ಇನ್ನು ಉಪ್ಪು ಸರಬರಾಜು ಸರಿಯಾಗಿ ಆಗದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಅಂಗಡಿಗಳ ಮಾಲೀಕರು, ಇರುವ ಉಪ್ಪನ್ನು ಮೂಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಉಪ್ಪಿನ ಕೊರತೆಯನ್ನೇ ಲಾಭದ ಹಾದಿಯನ್ನಾಗಿ ಮಾಡಿಕೊಂಡಿದ್ದು, ಇದು ಉಪ್ಪಿನ ತವರಲ್ಲೇ ಗ್ರಾಹಕರ ಜೇಬಿಗೆ ಹೊರೆಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯೇ ಸರಿ.
PublicNext
07/09/2022 04:49 pm