ಬೆಂಗಳೂರು: ಕಸ ವಿಲೇವಾರಿ ವಾಹನ (ಕಾಂಪ್ಯಾಕ್ಟರ್) ಡಿಕ್ಕಿ ಹೊಡೆದು ಸಾವು, ನೋವು ಸಂಭವಿಸುತ್ತಿರುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿರುವುದು ಬಿಬಿಎಂಪಿ ಪಾಲಿಗೆ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಕ್ರಮಗಳಿಗೆ ಬಿಬಿಎಂಪಿ ಮುಂದಾಗಿದೆ.
ಕಸ ವಿಲೇವಾರಿಗೆ ನಗರದ 198 ವಾರ್ಡ್‌ಗಳಿಗೂ ಅನ್ವಯವಾಗುವಂತೆ ಹೊಸ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆಸಿರುವ ಬಿಬಿಎಂಪಿ, ಹೊಸ ವಾಹನ ಬಳಸುವವರಿಗೆ ಮಾತ್ರ ಗುತ್ತಿಗೆ ನೀಡಲಾಗುತ್ತಿದೆ ಎಂಬ ಷರತ್ತು ವಿಧಿಸಲು ಚಿಂತನೆ ನಡೆಸಿದೆ.
ಪ್ರಸ್ತುತ ಬಿಬಿಎಂಪಿಯು 588 ಕಾಂಪ್ಯಾಕ್ಟರ್ ವಾಹನಗಳನ್ನು ಕಸ ಸಾಗಣೆಗೆ ಬಳಸುತ್ತಿದೆ. ಇವುಗಳಲ್ಲಿ ಹೆಚ್ಚಿನ ವಾಹನಗಳನ್ನು ಹೊರಗುತ್ತಿಗೆ ಆಧಾರದಲ್ಲೇ ಬಳಸಲಾಗುತ್ತಿದೆ. ಬಿಬಿಎಂಪಿಯು 22 ಕಾಂಪ್ಯಾಕ್ಟರ್‌ಗಳನ್ನು ಹೊಂದಿದೆಯಾದರೂ ಅವುಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಿದೆ. ಕಸ ಸಾಗಣೆಗೆ ಬಳಕೆಯಾಗುತ್ತಿರುವ ಬಹುತೇಕ ವಾಹನಗಳು 10 ವರ್ಷಗಳಿಗೂ ಹಳೆಯವಾಗಿವೆ.
ಕಸ ಸಾಗಿಸುವ ವಾಹನಗಳಿಗೆ 'ವೇಗ ನಿಯಂತ್ರಕ'ಗಳನ್ನು (ಸ್ಪೀಡ್ ಗವರ್ನರ್) ಅಳವಡಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಕಾಂಪ್ಯಾಕ್ಟರ್‌ಗಳಿಗೆ ವೇಗ ನಿಯಂತ್ರಕ ಅಳವಡಿಸಿದರೆ ಇನ್ನೊಂದು ರೀತಿಯ ಸಮಸ್ಯೆಯನ್ನು ಬಿಬಿಎಂಪಿ ಎದುರಿಸಬೇಕಾಗುತ್ತದೆ. ಕೆಂಗೇರಿಯಂತಹ ಕಡೆಯಿಂದ ಮಿಟ್ಟಗಾನಹಳ್ಳಿಗೆ ಕಸ ಸಾಗಿಸುವ ವಾಹನವು 45 ಕಿ.ಮೀ.ಗೂ ಹೆಚ್ಚು ದೂರಕ್ಕೆ ಸಂಚರಿಸಬೇಕಾಗುತ್ತದೆ. ವೇಗ ನಿಯಂತ್ರಕಗಳನ್ನು ಅಳವಡಿಸಿದರೆ ವಾಹನ ಸಾಗುವ ವೇಗ ಕಡಿಮೆ ಆಗಲಿದೆ. ಇದರಿಂದ ಕಸ ವಿಲೇವಾರಿ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯೂ ಇದೆ.
PublicNext
21/04/2022 12:42 pm