ಬೆಂಗಳೂರು: ಈ ವರ್ಷ ಅಕ್ಟೋಬರ್‌ನಲ್ಲಿ ಬೆಂಗಳೂರು-ಮೈಸೂರು ಹೈವೇ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ ಅವರು, "ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರು- ನಿಡಘಟ್ಟ- ಮೈಸೂರು 117 ಕಿ.ಮೀ ಉದ್ದದ ರಸ್ತೆಯನ್ನು 8,350 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ರಸ್ತೆ ನಿರ್ಮಾಣ ಕಾರ್ಯವು ಮುಕ್ತಾಯದ ಹಂತದಲ್ಲಿದ್ದು, ಅಕ್ಟೋಬರ್ 2022ರೊಳಗೆ ಪೂರ್ಣಗೊಳ್ಳಲಿದೆ" ಎಂದು ಮಾಹಿತಿ ನೀಡಿದ್ದಾರೆ.
ಈ ಹೆದ್ದಾರಿ ಯೋಜನೆ ಪೂರ್ಣಗೊಂಡರೆ ಬೆಂಗಳೂರು- ಮೈಸೂರು ಮಧ್ಯೆ ಇರುವ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಪ್ರಯಾಣದ ಅವಧಿ ತಗ್ಗುತ್ತದೆ. ಇದರಿಂದ ಬೆಂಗಳೂರಿನ ಮೇಲಿನ ವಾಸ್ತವ್ಯದ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಅತ್ಯಾಧುನಿಕ ಯೋಜನೆಯು 8 ಕಿಮೀ ಉದ್ದದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಚಿಕ್ಕ ಸೇತುವೆಗಳು, 64 ಅಂಡರ್‍ಪಾಸ್‍ಗಳು, 11 ಮೇಲ್ಸೇತುವೆಗಳು ಮತ್ತು 5 ಬೈಪಾಸ್‌ಗಳಂತಹ ಬಹು ರಚನೆಗಳನ್ನು ಹೊಂದಿದೆ. ಇದು ಸಂಚಾರ ದಟ್ಟಣೆಯನ್ನು ನಿವಾರಿಸುವುದರ ಜೊತೆಗೆ ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
PublicNext
28/03/2022 03:15 pm