ವಿಶೇಷ ವರದಿ: ಗಣೇಶ್ ಹೆಗಡೆ
ಬೆಂಗಳೂರು: ನಗರದಲ್ಲಿ ಸತತ ಎರಡು ತಿಂಗಳಿಂದ ಸುರಿಯುತ್ತಿ ರುವ ಮಳೆಯಿಂದಾಗಿ ರಸ್ತೆ ಗಳೆಲ್ಲವೂ ಗುಂಡಿಮಯ ವಾಗಿದ್ದರೂ ಅವುಗಳನ್ನು ಮುಚ್ಚಲು ಬೇಕಾದ ಬಿಸಿ ಡಾಂಬರು ಮಿಶ್ರಣ ಘಟಕ ಕಳೆದ 10 ದಿನಗಳಿಂದ ಸ್ಥಗಿತಗೊಂಡಿದೆ.
ಪ್ರತಿವರ್ಷ ಮಳೆಗಾಲದಲ್ಲಿ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ವಿಫಲವಾಗಿದೆ ಎಂದು ಹೈಕೋರ್ಟ್ ಮತ್ತು ಸರ್ಕಾರದಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ.
ಇತ್ತೀಚೆಗೆ 'ಪಬ್ಲಿಕ್ ನೆಕ್ಸ್ಟ್' ಈ ಬಗ್ಗೆ ವರದಿ ಮಾಡಿತ್ತು. ಆದರೆ, ಪಾಲಿಕೆಯೇ ಸ್ವಂತವಾಗಿ ಎರಡು ವರ್ಷಗಳ ಹಿಂದೆ ಕಣ್ಣೂರಿನಲ್ಲಿ 7.5 ಕೋಟಿ ರೂ. ವೆಚ್ಚದಲ್ಲಿ ಬಿಸಿ ಡಾಂಬರ್ ಮಿಶ್ರಣ ಘಟಕ (ಹಾಟ್ ಮಿಕ್ಸ್ ಬ್ಯಾಚ್ ಪ್ಲಾಂಟ್) ನಿರ್ಮಿಸಿದೆ.
ಈ ಘಟಕವನ್ನು ನಿರ್ವಹಣೆ ಮಾಡುವಲ್ಲಿ ಗುತ್ತಿಗೆದಾರರು ಮತ್ತು ಪಾಲಿಕೆ ನಡುವೆ ಕಿತ್ತಾಟವಾಗಿ 4 ತಿಂಗಳು ಸ್ಥಗಿತಗೊಂಡಿತ್ತು. ಕಳೆದ ಕೆಲವು ದಿನಗಳಿಂದ ಬೇರೊಬ್ಬರಿಗೆ ಟೆಂಡರ್ ನೀಡಿ ಡಾಂಬರು ಘಟಕ ಆರಂಭಿಸಿದ್ದರೂ ಪುನಃ ಹಲವು ನೆಪ ಒಡ್ಡಿ ಘಟಕ ಬಂದ್ ಮಾಡಲಾಗಿದೆ.
ಇನ್ನು, ಡಾಂಬರ್ ಮಿಶ್ರಣಕ್ಕೆ ಸಣ್ಣದಾದ ಜಲ್ಲಿಕಲ್ಲು ಬೇಕಾಗಿದ್ದು, ಅದು ನೀರಿನಿಂದ ಒದ್ದೆಯಾಗಿದೆ. ಕಳೆದ ಹತ್ತು ದಿನಗಳಿಂದ ಡಾಂಬರ್ ಘಟಕ ಬಂದ್ ಮಾಡಿದ್ದು, ಈವರೆಗೆ ಯಾವುದೇ ರಸ್ತೆ ಗುಂಡಿಗಳನ್ನು ಡಾಂಬರಿನಿಂದ ಮುಚ್ಚಿಲ್ಲ. ಮಳೆಗಾಲದಲ್ಲಿ ಘಟಕ ಆರಂಭಿಸಿದರೆ ಬಿಸಿಯಾದ ಡಾಂಬರ್ ಉತ್ಪಾದನೆಯಾಗದೆ ಗುಂಡಿ ಮುಚ್ಚುವಿಕೆ ಕಳಪೆಯಾಗಿ ಮೂರ್ನಾಲ್ಕು ದಿನದಲ್ಲಿ ಕಿತ್ತು ಬರುತ್ತದೆ. ಮಳೆ ನಿಂತು, ಎರಡು ದಿನ ಬಿಸಿಲು ಬಂದರೆ ಮಾತ್ರ ಘಟಕ ಆರಂಭಿಸಲಾಗುವುದು ಎಂದು ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿ ಮಾಹಿತಿ ನೀಡಿದ್ದಾರೆ.
PublicNext
20/11/2021 03:37 pm