ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಕೋಟಿ ಕೋಟಿ ರೂಪಾಯಿ ಹಣ ಮಂಜೂರು ಮಾಡುತ್ತಿದೆ. ಆದ್ರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳದೇ, ಬಹುಕಾಲ ಬಾಳಿಕೆ ಬರುವ ಕಾಮಗಾರಿಗಳ ಆಯಸ್ಸು ಕೆಲವೇ ದಿನಗಳಿಗೆ ಸೀಮಿತ ಆಗುವಂತೆ ಆಗ್ತಿದೆ. ಇದಕ್ಕೆ ಸಾಕ್ಷಿ ಗಡಿಭಾಗದ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ರಸ್ತೆ ಕಾಮಗಾರಿಗಳು.
ಒಂದು ತಿಂಗಳ ಹಿಂದೆ ನಿರ್ಮಿಸಿದ ಡಾಂಬರ್ ರಸ್ತೆಗಳು ಜಲ್ಲಿ ಸಮೇತ ಕಿತ್ತು ಬರುತ್ತಿದೆ. ರಸ್ತೆ ಅವ್ಯವಸ್ಥೆ ನೋಡಿ 40% ಕಮಿಷನ್ ದಂಧೆಗೆ ಇದೊಂದು ಹಸಿ ಹಸಿ ಎಕ್ಸಾಂಪಲ್ ಎಂದು ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
40 ಲಕ್ಷ ರೂಪಾಯಿಯ ಈ ರಸ್ತೆ ಬಾಳಿದ್ದು ಮಾತ್ರ 30 ದಿನವಷ್ಟೇ..ಹೌದು ಜಿಲ್ಲಾ ಪಂಚಾಯತಿ ಅನುದಾನದಲ್ಲಿ ಕೊಟ್ಟಲಗಿ-ಕನಮಡಿ ರಸ್ತೆ ನಿರ್ಮಿಸಲಾಗಿದ್ದು, ಈ ಡಾಂಬರ್ ರಸ್ತೆಯನ್ನು ಕೈಯಿಂದ ಮುಟ್ಟಿದ್ರೂ ಸಾಕು ಡಾಂಬರ್ ರೊಟ್ಟಿಯಂತೆ ಕಿತ್ತು ಬರುತ್ತೆ. ಲಘು ವಾಹನ ಓಡಾಡಿದ್ರೂ ಡಾಂಬರ್ ಕಿತ್ತು ಬರುತ್ತಿದೆ. ರಸ್ತೆ ಅಂಚಿನವರೆಗೂ ಡಾಂಬರ್ ಹಾಕಿಲ್ಲ. ಆಳವಾಗಿ ಡಾಂಬರ್ ಹಾಕದೇ ತೆಳುವಾಗಿ ಸುರಿದು ರೋಲ್ ಮಾಡಲಾಗಿದೆ. ಈಗಾಗಲೇ ಎರಡು ಬಾರಿ ಸುರಿದ ಅಕಾಲಿಕ ಮಳೆಯಿಂದ ಡಾಂಬರ್ ಕಿತ್ತು ಬಂದ ಸ್ಥಳದಲ್ಲಿ ನೀರು ಸಂಗ್ರಹವಾಗಿ ಗುಂಡಿಗಳು ನಿರ್ಮಾಣವಾಗಿವೆ. ಈ ರಸ್ತೆಯಲ್ಲಿ ನಡೆದಾಡಿದರೂ ಕೆಲವೆಡೆ ತಗ್ಗುತ್ತಿದೆ.
ಇನ್ನು ಕಳಪೆ ಕಾಮಗಾರಿಯಿಂದ ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರ ಜೊತೆ ಅಧಿಕಾರಿಗಳು ಶಾಮೀಲಾಗಿ ಕಳಪೆ ಕಾಮಗಾರಿ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. ಸರ್ಕಾರ ರಸ್ತೆ ಮರು ನಿರ್ಮಾಣ ಮಾಡಿ ಕೊಡಬೇಕು. ಶೀಘ್ರ ರಸ್ತೆ ಮರುನಿರ್ಮಾಣ ಮಾಡದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ವರದಿ : ಸಂತೋಷ ಬಡಕಂಬಿ, ಪಬ್ಲಿಕ್ ನೆಕ್ಸ್ಟ್, ಅಥಣಿ
PublicNext
17/08/2022 04:51 pm