ಬೆಂಗಳೂರು: ಗಣೇಶೋತ್ಸವ ಆಚರಣೆಗೆ ಹೊರಡಿಸಿರುವ ಕೆಲವು ಅವೈಜ್ಞಾನಿಕ ಮಾರ್ಗಸೂಚಿಗಳನ್ನು ಬದಲಾಯಿಸುವಂತೆ ಒತ್ತಾಯಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಮತ್ತು ಹಿಂದೂಪರ ಸಂಘಟನೆಗಳು ಇಂದು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
‘ವಾರ್ಡ್ಗೆ ಒಂದೇ ಗಣೇಶ ಮೂರ್ತಿ ಸ್ಥಾಪನೆ ಮಾಡಬೇಕು, ನಾಲ್ಕು ಅಡಿಗಿಂತ ಎತ್ತರ ಇರಬಾರದು, ಮೂರು ದಿನ ಮಾತ್ರ ಉತ್ಸವ ನಡೆಯಬೇಕು ಎಂಬ ಷರತ್ತುಗಳನ್ನು ವಿಧಿಸುವ ಮೂಲಕ ಹಬ್ಬದ ಆಚರಣೆಗೆ ಅಡ್ಡಿ ಮಾಡಲಾಗುತ್ತಿದೆ. ಈ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಒತ್ತಾಯಿಸಿದರು.
‘12 ಅಡಿ ಎತ್ತರದವರೆಗಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಬೇಕು ಮತ್ತು ಕನಿಷ್ಠ ಐದು ದಿನಗಳವರೆಗಾದರೂ ಉತ್ಸವ ನಡೆಸಲು ಅವಕಾಶ ನೀಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ನಗರದ ವಿವಿಧ ಗಣೇಶೋತ್ಸವ ಸಮಿತಿಗಳು, ಬಿಬಿಎಂಪಿ ಕೇಂದ್ರ ಕಚೇರಿಯ ಆವರಣಕ್ಕೇ ಗಣೇಶ ಮೂರ್ತಿಗಳನ್ನು ತಂದು ಪ್ರತಿಭಟನೆ ಮಾಡಿದರು.
PublicNext
09/09/2021 03:11 pm