ಶಿಮ್ಲಾ: ವಿಶ್ವದ ಅತಿ ಉದ್ದವಾದ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶದ ಅಟಲ್ ಸುರಂಗ ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.
9.2 ಕಿ.ಮೀ ಉದ್ದದ ಅಟಲ್ ಸುರಂಗ ಮಾರ್ಗವೂ ವಿಶ್ವದಲ್ಲಿಯೇ ಅತೀ ಉದ್ದದ ಹೆದ್ದಾರಿ ಮಾರ್ಗವೆಂದು ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮನಾಲಿಯ ದಕ್ಷಿಣ ತುದಿಯಲ್ಲಿ ನಿರ್ಮಿತಗೊಂಡ ಅಟಲ್ ಸುರಂಗ ಮಾರ್ಗದ ಈ ಐತಿಹಾಸಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ , ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರೂ ಭಾಗವಹಿಸಿದ್ದರು.
ಸುರಂಗ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ "ಸುರಂಗ ನಿರ್ಮಾಣದ ಹಿಂದಿರುವ ಶ್ರಮಿಕ ಜೀವಿಗಳಿಗೆ ಮೊದಲಿಗೆ ಧನ್ಯವಾದ ತಿಳಿಸಿದ ಮೋದಿ, ಇಂದು ಅಟಲ್ ಜೀ ಕನಸು ಮಾತ್ರ ನನಸಾಗಿಲ್ಲ. ದಶಕಗಳವರೆಗೆ ಕಾದಿದ್ದ ಹಿಮಾಚಲ ಪ್ರದೇಶದ ಜನರ ಕಾಯುವಿಕೆ ದೂರವಾಗಿದೆ ಎಂದರು.
ಅಟಲ್ ಸುರಂಗವು ಹಿಮಾಚಲ ಪ್ರದೇಶದ ಜೀವನಾಡಿಯಾಗಲಿದೆ. ಅಲ್ಲದೆ, ಲಡಾಖ್‌ಗೂ ಸಹಕಾರಿಯಾಗಲಿದ್ದು, ಗಡಿ ಭದ್ರತೆಯನ್ನು ಹೆಚ್ಚಿಸುತ್ತದೆ. ಬೆಟ್ಟಗಳ ಮೇಲಿನ ಮಾರ್ಗದಲ್ಲಿ 3 ರಿಂದ 4 ಗಂಟೆಯ ದೂರ ಕಡಿಮೆಯಾಗಿರುವುದರ ಅರ್ಥ ಏನೆಂಬುದನ್ನು ಹಿಮಾಚಲ ಪ್ರದೇಶದ ನನ್ನ ಸಹೋದರ-ಸಹೋದರಿಯರು ಅರ್ಥ ಮಾಡಿಕೊಳ್ಳುತ್ತಾರೆ" ಎಂದು ಪ್ರಧಾನಿ ಮೋದಿ ಹೇಳಿದರು.
ಬರೋಬ್ಬರಿ 10 ಸಾವಿರ ಅಡಿಗಿಂತ ಹೆಚ್ಚು ಉದ್ದವಾಗಿರುವ ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಅಟಲ್ ಸುರಂಗ ಮಾರ್ಗ ಪಾತ್ರವಾಗಿದೆ. 9.2 ಕಿ.ಮೀ ಉದ್ದವಿರುವ ಈ ಸುರಂಗದಲ್ಲಿ ಪ್ರತಿ 60 ಮೀಟರ್‌ಗಳಿಗೆ ಸಿಸಿಟಿವಿ ಕ್ಯಾಮರಾ ಮತ್ತು ಸುರಂಗದ ಒಳಗೆ ಪ್ರತಿ 500 ಮೀಟರ್‌ಗೆ ತುರ್ತು ನಿರ್ಗಮನ ಬಾಗಿಲುಗಳಿವೆ, ಅಗ್ನಿ ಅನಾಹುತಗಳಿಂದ ಕಾಪಾಡಲು ಫೈರ್ ಹೈಡ್ರಾಂಟ್ಸ್ ಅಳವಡಿಸಲಾಗಿದೆ.
ಈ ಹಿಂದೆ ವರ್ಷದಲ್ಲಿ ಆರು ತಿಂಗಳು ಈ ಮಾರ್ಗದಲ್ಲಿ ಹಿಮಪಾತವಾಗುತ್ತಿದ್ದರಿಂದ, ಅರ್ಧ ವರ್ಷ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿತ್ತು. ಈಗ ಸುರಂಗ ನಿರ್ಮಾಣವಾಗಿರುವುದರಿಂದ, ವರ್ಷಪೂರ್ತಿ ಮನಾಲಿಯಿಂದ ಲಹೌಲ್ - ಸ್ಪಿತಿ ಕಣಿವೆಗೆ ಸಂಚರಿಸಬಹುದಾಗಿದೆ.
ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ (ಎಂಎಸ್‌ಎಲ್) 3,000 ಮೀಟರ್ (10,000 ಅಡಿ) ಎತ್ತರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಸುರಂಗವನ್ನು ನಿರ್ಮಿಸಲಾಗಿದೆ. ಈ ಸುರಂಗ 10 ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ.
10 ವರ್ಷಗಳಲ್ಲಿ ಪೂರ್ಣಗೊಳಿಸಲಾದ ಈ ಸುರಂಗ ಮಾರ್ಗ, 10.5 ಮೀಟರ್ ಅಗಲ, ಎರಡು ಬದಲಿಯಲ್ಲಿಯೂ 1 ಮೀಟರ್‌ನಷ್ಟು ಫೂಟ್‌ಪಾತ್ ಇದ್ದು, ಈ ಸುರಂಗದಿಂದಾಗಿ ಮನಾಲಿ-ಲೇಹ್ ನಡುವಿನ ಪ್ರಯಾಣದ ಅಂತರ 46 ಕಿ.ಮೀನಷ್ಟು ಕಡಿಮೆಯಾಗಲಿದ್ದು 4 ಗಂಟೆಗಳ ಉಳಿತಾಯವಾಗಲಿದೆ. ಚಳಿಗಾಲದಲ್ಲಿ ರೋಹ್ಟಾಂಗ್ ಪಾಸ್ 6 ತಿಂಗಳುಗಳ ಕಾಲ ಮುಚ್ಚಿರುವುದರಿಂದ ಮನಾಲಿ-ಸರ್ಚು-ಲೇಹ್ ರಸ್ತೆಯೂ ಬಂದ್ ಆಗುತ್ತದೆ. ಹಾಗಾಗಿ ಈ ಸುರಂಗ ಮಾರ್ಗವು ಲೇಹ್-ಮನಾಲಿಯನ್ನು ಸಂಪರ್ಕಿಸುವಲ್ಲಿ ಪ್ರಧಾನ ಪಾತ್ರವಹಿಸಲಿದೆ.
ಈ ಯೋಜನೆಯನ್ನು 1983ರಲ್ಲಿ ಇಂದಿರಾ ಗಾಂಧಿ ಸರ್ಕಾರ ರೂಪಿಸಿತ್ತು, ಬಳಿಕ ಜೂನ್ 2000ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸುರಂಗ ಕಾರ್ಯವನ್ನು ಘೋಷಿಸಿ, ಶಂಕು ಸ್ಥಾಪನೆ ಮಾಡಿದ್ದರು. ಸುರಂಗದ ಕೆಲಸ ಪದೇ ಪದೇ ನಿಂತು ಹೋಗಿ ನಂತರ 2010ರ ಜೂನ್‌ನಲ್ಲಿ ಪ್ರಾರಂಭವಾಯಿತು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮದಿನಾಚರಣೆ ನೆನಪಿಗಾಗಿ 2019 ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ರೋಹ್ಟಾಂಗ್ ಮಾರ್ಗವನ್ನು ಅಟಲ್ ಸುರಂಗ ಎಂದು ಮರುನಾಮಕರಣ ಮಾಡಿದರು.
PublicNext
03/10/2020 11:53 am