ಉಳ್ಳಾಲ: ಸೋಮೇಶ್ವರ ಕಡಲ ತೀರದಿಂದ ನಿರಂತರವಾಗಿ ಮರಳು ಕಳ್ಳತನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಳ್ಳತನ ತಡೆಯಲು ಹಾಕಿದ್ದ ಸಿಸಿ ಟಿವಿ ಮತ್ತು ತಂತಿಯ ತಡೆಬೇಲಿಯನ್ನೇ ಮರಳು ಕಳ್ಳರು ಧ್ವಂಸಗೈದು ಅಟ್ಟಹಾಸ ಮೆರೆದಿದ್ದಾರೆ!
ಮರಳು ಕಳ್ಳತನ ತಡೆಯಲು ಸೋಮೇಶ್ವರ ಸಮುದ್ರ ತೀರ, ಕೋಟೆಪುರ, ತಲಪಾಡಿ ಇನ್ನಿತರ ಪ್ರದೇಶಗಳಲ್ಲಿ ಜಿಲ್ಲಾಡಳಿತ ಇಂಟರ್ನೆಟ್ ಆಧಾರಿತ ಸಿಸಿ ಟಿವಿ ಅಳವಡಿಸಿತ್ತು. ಸೆ.10ರ ಮುಂಜಾವ 1.30ರ ವೇಳೆ ಸೋಮೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯನ್ನು ಟಿಪ್ಪರೊಂದು ಹಿಮ್ಮುಖವಾಗಿ ಚಲಿಸಿ ಧ್ವಂಸ ಮಾಡಿದೆ. ಮರಳು ಕಳ್ಳರು ಸಿಸಿ ಕ್ಯಾಮೆರಾವನ್ನು ಟಿಪ್ಪರ್ ಮುಖೇನ ಪುಡಿಗೈದ ವೀಡಿಯೊ ದಾಖಲಾಗಿದೆ.
ತಿಂಗಳ ಹಿಂದಷ್ಟೇ ತಲಪಾಡಿಯಲ್ಲೂ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾವನ್ನು ಒಂದೇ ದಿವಸದಲ್ಲಿ ಪುಡಿಗೈಯಲಾಗಿತ್ತು.
ಮರಳು ಕಳ್ಳತನ ತಡೆಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಸೋಮೇಶ್ವರ ಸಮುದ್ರ ತೀರದುದ್ದಕ್ಕೂ ಹಾಕಿದ್ದ ತಂತಿ ಬೇಲಿಯನ್ನೂ ಮುರಿದು ಹಾಕಲಾಗಿದೆ. ಉಳ್ಳಾಲ ನಗರಸಭೆ ವ್ಯಾಪ್ತಿಗೆ ಬರುವ ಸೋಮೇಶ್ವರ ಮೂಡ ಲೇಔಟಲ್ಲಿ ಹಾಕಲಾಗಿದ್ದ ತಂತಿ ಬೇಲಿಯನ್ನೇ ಮರಳು ಕಳ್ಳರು ಧ್ವಂಸಗೊಳಿಸಿದ್ದಾರೆ.
ಸರಕಾರಿ ಆಸ್ತಿ ನಷ್ಟಗೊಳಿಸಿದ ಮರಳು ಕಳ್ಳರ ವಿರುದ್ಧ ಈ ವರೆಗೂ ದೂರು ದಾಖಲಾಗಿಲ್ಲ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು ಡಿ.ಎ. ಅವರು ಸಿಸಿ ಟಿವಿ ಕ್ಯಾಮೆರಾ ಮತ್ತು ತಂತಿ ತಡೆಬೇಲಿ ಧ್ವಂಸದ ಬಗ್ಗೆ ಕಂದಾಯ ನಿರೀಕ್ಷಕರಲ್ಲಿ ಪೊಲೀಸ್ ದೂರು ನೀಡಲು ಸೂಚಿಸಿರುವುದಾಗಿ ಹೇಳಿದ್ದಾರೆ.
PublicNext
11/09/2022 02:52 pm