ನವದೆಹಲಿ: ತೈಲ ದರ ಕಡಿಮೆ ಆಯ್ತು. ಆದ್ರೆ ದಿನಸಿ ಸಾಮಗ್ರಿ ಬೆಲೆ ಕಡಿಮೆ ಆಗಲಿಲ್ಲ ಎನ್ನುತ್ತಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರ ದೀಪಾವಳಿ ಗಿಫ್ಟ್ ಕೊಟ್ಟಿದೆ. ಅಡುಗೆ ಎಣ್ಣೆ ಮೇಲಿನ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ, ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಖುಷಿ ಎನಿಸುವಷ್ಟು ರಿಲೀಫ್ ಕೊಟ್ಟಿದೆ.
ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ತೈಲದ ಮೂಲ ಸುಂಕವನ್ನು ಶೇ.2.5 ರಿಂದ ಶೂನ್ಯಕ್ಕೆ ಕಡಿತಗೊಳಿಸಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆ ತಿಳಿಸಿದೆ. ಅಡುಗೆ ತೈಲಗಳ ಮೇಲಿನ ಕೃಷಿ-ಸೆಸ್ ಅನ್ನು ಕಚ್ಚಾ ತಾಳೆ ಎಣ್ಣೆಗೆ ಶೇ.20ರಿಂದ ಶೇ.7.5ಕ್ಕೆ ಇಳಿಕೆ ಮಾಡಲಾಗಿದ್ದು, ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ತೈಲದ ಮೇಲಿನ ಸೆಸ್ ಶೇ.5ಕ್ಕೆ ಇಳಿಸಲಾಗಿದೆ.
ಈ ಕುರಿತು ಕೇಂದ್ರ ಆಹಾರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದು, ಅಡುಗೆ ಎಣ್ಣೆಗಳ ಮೇಲಿನ ಸೆಸ್ ಇಳಿಕೆಯಿಂದ ಅಡುಗೆ ಎಣ್ಣೆ ದರ ಗಣನೀಯವಾಗಿ ಇಳಿಕೆ ಕಂಡಿದ್ದು, ಪಾಮ್ ಆಯಿಲ್, ಶೇಂಗಾ ಎಣ್ಣೆ, ಸೋಯಾಬಿನ್ ಎಣ್ಣೆ, ಸೂರ್ಯಕಾಂತಿ ಸೇರಿ ಬಹುತೇಕ ಅಡುಗೆ ಎಣ್ಣೆ ದರ ಕಡಿಮೆಯಾಗಿದೆ. ಅದ್ರಂತೆ ಅಡುಗೆ ಎಣ್ಣೆ ದರ 7 ರೂಪಾಯಿಯಿಂದ 20 ರೂಪಾಯಿವರೆಗೆ ಇಳಿಕೆ ಮಾಡಲಾಗಿದ್ದು, ಪ್ರತಿ ಕೆ.ಜಿಗೆ 20 ರೂಪಾಯಿಗಳವರೆಗೆ ಕಡಿಮೆಯಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
PublicNext
06/11/2021 08:18 am