ಬೆಂಗಳೂರು:ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಅಂತ್ಯಗೊಳ್ಳುವ ಸಾಧ್ಯತೆ ಇದ್ದು ಅಧಿಕೃತ ನಿರ್ಧಾರ ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು, ಕೋವಿಡ್ ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ 30 ಲಕ್ಷ ಪರಿಹಾರ, ಮೇಲಾಧಿಕಾರಿಗಳ ಕಿರುಕುಳಕ್ಕೆ ಬ್ರೇಕ್, ವೇತನ ಹೆಚ್ಚಳ ಹಾಗೂ ತಾರತಮ್ಯ ನಿವಾರಣೆ ವಿಚಾರಗಳನ್ನು ಮುಂದಿಟ್ಟುಕೊಂಡು ಕಳೆದ ನಾಲ್ಕು ದಿನಗಳಿಂದ ನಾಲ್ಕು ವಿಭಾಗಗಳ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ಮುಷ್ಕರ ಪರಿಣಾಮ ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಪ್ರತಿಭಟನಾನಿರತರ ಜೊತೆಗೆ ಸರ್ಕಾರ ಸಂಧಾನ ನಡೆಸಿ ಬಹುತೇಕ ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಹೊರತಾಗಿ ಇತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್ ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಜೊತೆಗೆ ಸಭೆ ನಡೆಸಿ ಸಂಧಾನ ಮಾತುಕತೆ ನಡೆಸಿದ್ದರು. ಈ ವೇಳೆ ಇದಕ್ಕೆ ಒಪ್ಪಿಗೆ ಸೂಚಿಸಿ ಮುಷ್ಕರ ವಾಪಸ್ ಪಡೆಯುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಬಳಿಕ ಮುಷ್ಕರವನ್ನು ಮುಂದುವರಿಸುವ ನಿರ್ಧಾರವನ್ನು ಸಾರಿಗೆ ನೌಕರರು ಪ್ರಕಟಿಸಿದ್ದರು. ಇದು ಗೊಂದಲಕ್ಕೆ ಕಾರಣವಾಗಿತ್ತು.
PublicNext
14/12/2020 09:49 am