ಬೆಂಗಳೂರು: ಮರಾಠ ಅಭಿವೃದ್ದಿ ಪ್ರಾಧಿಕಾರ ವಿರೋಧಿಸಿ ಡಿಸೆಂಬರ್ 5 ಕ್ಕೆ ಕರ್ನಾಟಕ ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ. ಶುಕ್ರವಾರ ನಡೆದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗ್ಗೆ 6 ರಿಂದ ಸಂಜೆ ಆರು ಗಂಟೆಯ ವರೆಗೆ ಬಂದ್ ನಡೆಯಲಿದೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏನೆಲ್ಲಾ ಇರುತ್ತೆ ಏನು ಇರುವುದಿಲ್ಲ ಎಂಬ ವಿವರ ಇಲ್ಲಿದೆ.
ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟ ಬಂದ್‌ಗೆ ಹಲವು ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿದೆ. ಈ ನಿಟ್ಟಿನಲ್ಲಿ ಯಾವುದೇ ವಾಹನ ಸಂಚಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ. ಪರಿಣಾಮ ಆಟೋ ಸಂಚಾರ, ಟ್ಯಾಕ್ಸಿ ಸಂಚಾರ, ಬೀದಿ ಬದಿ ಅಂಗಡಿ, ಮದ್ಯ ಮಾರಾಟ, ಹೋಟೆಲ್ ಹಾಗೂ ಇತರ ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಹೆಚ್ಚಾಗಿವೆ.
ಡಿಸೆಂಬರ್ 5 ರಂದು ಕರ್ನಾಟಕ ಬಂದ್ ನಡೆದರೂ ಆಸ್ಪತ್ರೆ , ಪೆಟ್ರೋಲ್ ಬಂಕ್, ಬ್ಯಾಂಕ್, ಸಾರಿಗೆ, ಮೆಡಿಕಲ್ ಹಾಗೂ ಸರ್ಕಾರಿ ಕಚೇರಿ ಬಂದ್ ಆಗುವುದಿಲ್ಲ. ಮೆಟ್ರೋ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇದೆಲ್ಲವುಗಳ ಮೇಲೆ ಅವಲಂಬಿತವಾದ ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯ ಇಲ್ಲ.
ಕನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದರೂ ತಮ್ಮ ಅಂತಿಮ ಹಾಗೂ ಅಧಿಕೃತ ನಿರ್ಧಾರವನ್ನು ಇದುವರೆಗೆ ಪ್ರಕಟಿಸಿಲ್ಲ. ಹೋಟೆಲ್ ಮಾಲೀಕರ ಸಂಘ ಸಭೆ ನಡೆಸಿ ಅಧಿಕೃತ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ. ಇನ್ನು ಲಾರಿ ಮಾಲೀಕರ ಸಂಘಟನೆಯೂ ಯಾವುದೇ ಅಧಿಕೃತ ನಿರ್ಧಾರ ತಿಳಿಸಿಲ್ಲ.
PublicNext
20/11/2020 04:24 pm