ತಿರುಪತಿ: ಆಂಬ್ಯುಲೆನ್ಸ್ ಚಾಲಕನು ಮೃತದೇಹವನ್ನು ಕೊಂಡೊಯ್ಯಲು ಭಾರಿ ಮೊತ್ತ ಕೇಳಿದ್ದು ಮೊದಲೇ ಮಗನ ಸಾವಿನಿಂದ ನೊಂದಿದ್ದ ತಂದೆ ಮಗನ ಶವವನ್ನು ತಿರುಪತಿಯಿಂದ 90 ಕಿ.ಮೀ ದೂರದಲ್ಲಿರುವ ತನ್ನ ಗ್ರಾಮಕ್ಕೆ ಬೈಕ್‌ನಲ್ಲಿ ಕೊಂಡೊಯ್ದ ದಾರುಣ ಘಟನೆ ನಡೆದಿದೆ.
ಹೌದು. ಅನಾರೋಗ್ಯದ ಕಾರಣದಿಂದ ತಿರುಪತಿಯ ಆರ್‌ಯುಐಎ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಜೇಸವಾ ಸೋಮವಾರ ರಾತ್ರಿ ಸಾವಿಗೀಡಾಗಿದ್ದ. ಕೃಷಿ ಕೆಲಸಗಳನ್ನು ಮಾಡುವ ಆತನ ತಂದೆಗೆ ಆಸ್ಪತ್ರೆಯಿಂದ ಮೃತ ದೇಹವನ್ನು ಸಾಗಿಸಲು ಆಂಬ್ಯುಲೆನ್ಸ್ ಚಾಲಕ 10,000 ರೂ.ಗೆ ಬೇಡಿಕೆ ಇಟ್ಟಿದ್ದರು. ಅವರು ಆಸ್ಪತ್ರೆಯಿಂದ ಸುಮಾರು 90 ಕಿ.ಮೀ. ದೂರದ ಅನ್ನಮಯ್ಯ ಜಿಲ್ಲೆಯ ಚಿಟ್ವೇಲ್‌ಗೆ ಸಾಗಬೇಕಿತ್ತು. ದೊಡ್ಡ ಮೊತ್ತವನ್ನು ಕೊಡಲಾಗದ ತಂದೆಯು ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು. ಅವರು ಮತ್ತೊಂದು ಆಂಬ್ಯುಲೆನ್ಸ್ ಮೂಲಕ ಉಚಿತವಾಗಿ ಮೃತ ದೇಹ ಸಾಗಿಸಲು ವ್ಯವಸ್ಥೆ ಮಾಡಿದ್ದರು. ಆದರೆ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಮತ್ತೊಂದು ವಾಹನದಲ್ಲಿ ಮೃತ ದೇಹವನ್ನು ಸಾಗಿಸಲು ಅವಕಾಶ ಮಾಡಿಕೊಡದೆ, ತನ್ನ ಆಂಬ್ಯುಲೆನ್ಸ್‌ನಲ್ಲೇ ಸಾಗಿಸುವಂತೆ ಪಟ್ಟು ಹಿಡಿದಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.
ಚಾಲಕನ ಅಮಾನವೀಯ ನಡೆಗೆ ತೀವ್ರ ಬೇಸರಗೊಂಡ ತಂದೆ, ಮಗನ ದೇಹವನ್ನು ಅಪ್ಪಿ ಹಿಡಿದುಕೊಂಡು ಬೈಕ್ ಹಿಂಬದಿಯಲ್ಲಿ ಕುಳಿತು ಸಾಗಿದರು. ಯುವಕನೊಬ್ಬ ಬೈಕ್ ಚಾಲನೆ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇಂಥ ಘಟನೆಗಳು ಆಗಾಗ್ಗೆ ನಡೆಯುತ್ತಿರುವುದನ್ನು ಜನರು ಪ್ರಸ್ತಾಪಿಸಿದ್ದಾರೆ. ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
PublicNext
26/04/2022 04:34 pm