ಧಾರವಾಡ: ಎಳ್ಳುಂಡೆ, ಶೇಂಗಾ ಉಂಡೆ, ಖಾರದಾನಿ ಉಂಡೆ, ರವೆ ಉಂಡೆ, ಕೊಬ್ಬರಿ ಉಂಡೆ ಹೀಗೆ ತರಹೇವಾರಿ ಉಂಡೆಗಳ ಸಮ್ಮಿಲನವೇ ಅಲ್ಲಿ ಆಗಿತ್ತು. ಅದನ್ನು ನೋಡಿದವರ ಕಣ್ಣಿಗೆ ಹಬ್ಬವಾದರೆ, ನಾಲಿಗೆಗೆ ರುಚಿ ಸವಿಯುವ ತವಕ. ಇದೇನಪ್ಪ ಉಂಡೆಗಳ ಸಮ್ಮೇಳನ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಬೇಡಿ.
ಹೀಗೆ ಸಾಂಪ್ರದಾಯಿಕ ಉಡುಗೆ ತೊಟ್ಟು, ಚಕ್ಕಡಿಯನ್ನೇರಿ, ಜಾನಪದ ಹಾಡುಗಳನ್ನು ಹಾಡುತ್ತಿರುವ ಈ ಹೆಂಗಳೆಯರು ಧಾರವಾಡದ ಸಂಶೋಧನಾ ಕೇಂದ್ರದ ಸದಸ್ಯೆಯರು. ನಾಗರ ಪಂಚಮಿಯನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿ ಧಾರವಾಡ ಮತ್ತೊಮ್ಮೆ ಸಂಪ್ರದಾಯಕ್ಕೆ ಸಾಕ್ಷಿಯಾಗುವಂತೆ ಮಾಡಿದ್ದಾರೆ.
ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸಮ್ಮಿಲನಗೊಂಡ ಇವರು, ಮನೆಯಲ್ಲಿ ತಾವು ಸಿದ್ಧಪಡಿಸಿದ ವಿವಿಧ ತರಹದ ಉಂಡೆಗಳನ್ನು ತಂದು ನಾಗರ ಮೂರ್ತಿಗೆ ಹಾಲನೆರೆದು ಸಂಭ್ರಮಿಸಿದರು. ಅಲ್ಲದೇ ಜಾನಪದ ಹಾಡುಗಳನ್ನು ಹಾಡಿ ಖುಷಿಪಟ್ಟರು. ಇತ್ತ ಸಂಪ್ರದಾಯ ಬದ್ಧವಾದ ಹಾಗೂ ಹಳ್ಳಿ ಕೃಷಿಗೆ ಕಾರಣವಾದ ಚಕ್ಕಡಿಯನ್ನೇರಿದ ದಂಪತಿ ನಾಗರ ಪಂಚಮಿಯ ಸಂದೇಶ ಸಾರಿದರು.
ಇನ್ನು ಆಲೂರು ವೆಂಕಟರಾವ್ ಸಭಾಭವನ ಮುಂಭಾಗದಲ್ಲಿ ಉಂಡೆಗಳನ್ನು ಕಟ್ಟಿ ಅವುಗಳನ್ನು ಬಾಯಿಯಿಂದ ಕಚ್ಚುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಹಿಳೆಯರು, ಸ್ಪರ್ಧೆಯ ಜೊತೆಗೆ ಉಂಡೆಗಳ ರುಚಿ ಸವಿದರು.
ನಾಗರ ಪಂಚಮಿ ಎಂದರೆ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ಖುಷಿ. ತವರು ಮನೆಗೆ ಹೋಗಿ ಪಂಚಮಿ ಹಬ್ಬ ಆಚರಿಸಿ ಖುಷಿಪಡುತ್ತಾರೆ. ಈ ಸಂಪ್ರದಾಯ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಹಬ್ಬದ ಸಂದೇಶವನ್ನು ಜಾನಪದ ಸಂಶೋಧನಾ ಕೇಂದ್ರದ ಸದಸ್ಯೆಯರು ಸಾರಿ ಎಲ್ಲರ ಗಮನಸೆಳೆದಿದ್ದಂತೂ ಸುಳ್ಳಲ್ಲ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
01/08/2022 03:43 pm