ಹುಬ್ಬಳ್ಳಿ: ದಸರಾ ಗೊಂಬೆ ಉತ್ಸವ ಎಂದರೇ ಕೇವಲ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತ ಎಂಬ ಭಾವನೆ ಜನಮಾನಸದಲ್ಲಿದೆ. ಅದಕ್ಕೆ ಅಪವಾದ ಎಂಬಂತೆ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿಯೂ ಕೂಡ ದಸರಾ ಹಬ್ಬಕ್ಕೆ ವಿವಿಧ ಪರಿಕಲ್ಪನೆಯ ಗೊಂಬೆಗಳ ಉತ್ಸವ ವಿಶೇಷ ಗಮನ ಸೆಳೆಯುತ್ತಿದೆ.
ಹೌದು.. ವಿಶಿಷ್ಟಗೊಂಬೆ ಉತ್ಸವದ ಸಂಪ್ರದಾಯವನ್ನು ಹುಬ್ಬಳ್ಳಿಯಲ್ಲಿಯೂ ಮುಂದುವರಿಸಿ ಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ದಸರಾ ಮತ್ತು ನವರಾತ್ರಿ ಅಂಗವಾಗಿ ಹುಬ್ಬಳ್ಳಿಯ ಬಹುತೇಕ ಜನರು ತಮ್ಮ ಮನೆಯಲ್ಲಿ ಗೊಂಬೆ ಪ್ರತಿಷ್ಠಾಪನೆ ಕಾರ್ಯ ಮಾಡುತ್ತಿದ್ದು, ಆ ಮೂಲಕ ಸಂಬಂಧಿಕರು, ಸ್ನೇಹಿತರು ಹಾಗೂ ಮಹಿಳಾ ಮಂಡಳದವರನ್ನು ಒಗ್ಗೂಡಿಸಿಕೊಂಡು ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.
ಇನ್ನೂ ಪ್ರಮುಖವಾಗಿ ಮದುವೆಯ ಸಂಭ್ರಮ, ಗಂಡ-ಹೆಂಡತಿ, ರೈತರ ಸೊಗಡಿನ ಸಂತ ಹಳ್ಳಿಯ ಕೃಷ್ಣಾವತಾರ, ಗರುಡೋತ್ಸವ, ಶಾರದಾಂಬಾ, ದುರ್ಗಾದೇವಿ, ಶಿವಾಜಿ ಕೋಟೆ, ರಾಷ್ಟ್ರೀಯ ನಾಯಕರು ಸೇರಿದಂತೆ ವಿವಿಧ ಪರಿಕಲ್ಪನೆಗಳಿವೆ. ಸುಮಾರು 60 ವರ್ಷ ಹಳೆಯದಾದ ಪಿಂಗಾಣಿಯ ಗೊಂಬೆಗಳು ಕಾಣ ಸಿಗುತ್ತವೆ.
ಗೊಂಬೆ ಕೂರಿಸುವ ವಿಧಾನ ಹಂತಗಳಲ್ಲಿ ಕೂರಿಸುತ್ತಾರೆ. ಹೆಚ್ಚು ಸ್ಥಳಾವಕಾಶ ನೋಡಿಕೊಂಡು 3,5,7,9 ಗೊಂಬೆಗಳು ಇದ್ದವರು 9 ಹಂತಗಳಲ್ಲಿ ಕೂರಿಸಿದರೆ, ಇನ್ನು ಕೆಲವರು 7 ಹಂತಗಳಲ್ಲಿ ಕೆಲವರು 5 ಹಂತಗಳಲ್ಲಿ ಕೂರಿಸುತ್ತಾರೆ. ಮೊದಲ ಅಂತಸ್ತಿನಲ್ಲಿ ಪಟ್ಟದ ಬೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪಗಳು ಇವುಗಳನ್ನಿಟ್ಟು, ಎರಡು, ಮೂರು ಉಳಿದ ಅಂತಸ್ತುಗಳಲ್ಲಿ ಇತರ ಬೊಂಬೆಗಳನ್ನು ಜೋಡಿಸಲಾಗುತ್ತದೆ. ಅಷ್ಟಲಕ್ಷ್ಮೀಯರು, ದಶಾವತಾರದ ಬೊಂಬೆ, ಸೀತಾ ಕಲ್ಯಾಣದ ಜೋಡಿಗಳು, ವೈಕುಂಠ ಪ್ರದರ್ಶನದ ಬೊಂಬೆಗಳು, ಶಿವ-ಪಾರ್ವತಿಯರ ಕೈಲಾಸದ ಸೆಟ್ ಹೀಗೆ ಒಂದೊಂದು ಅಂತಸ್ತಿನಲ್ಲಿ ಒಂದೊಂದನ್ನು ಇಟ್ಟು ಅಲಂಕರಿಸಲಾಗುತ್ತದೆ. ಪ್ರತಿ ವರ್ಷ ಹಳೆಯ ಗೊಂಬೆಯ ಜೊತೆಗೆ ಒಂದು ಜೋಡಿ ಹೊಸ ಗೊಂಬೆಯನ್ನು ಸೇರಿಸಿ ಗೊಂಬೆ ಕೂರಿಸಬೇಕು ಎಂಬುದು ವಾಡಿಕೆ ಇದೆ.
Kshetra Samachara
14/10/2021 03:11 pm