ಧಾರವಾಡ: ಸಾಕಷ್ಟು ವಿರೋಧ, ಪ್ರತಿಭಟನೆಗಳಿಗೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಟ್ಟಿದೆ.
ನಾಳೆ ನಾಡಿನಾದ್ಯಂತ ಗಣೇಶ ಹಬ್ಬ ನಡೆಯಲಿದ್ದು, ಅದಕ್ಕಾಗಿ ವಿದ್ಯಾಕಾಶಿ ಧಾರವಾಡ ಸಜ್ಜಾಗಿದೆ. ಮೋದಕಪ್ರಿಯ, ಲಂಬೋದರ, ಗಜಾನನ, ವಿಘ್ನೇಶ್ವರ ಎಂಬ ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಗಣಪತಿ ಪ್ರತಿಷ್ಠಾಪನೆಯಿಂದ ಈ ವರ್ಷದ ಗಣೇಶ ಚತುರ್ಥಿ ರಂಗು ಪಡೆದುಕೊಂಡಿದೆ.
ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಣೇಶೋತ್ಸವಕ್ಕೆ ಬ್ರೇಕ್ ನೀಡಿತ್ತು. ಈ ವರ್ಷ ಕೂಡ ಗಣೇಶೋತ್ಸವಕ್ಕೆ ಅನುಮತಿ ಇಲ್ಲ ಎಂದು ಸರ್ಕಾರ ಹೇಳಿತ್ತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಗಣೇಶೋತ್ಸವಕ್ಕೆ ಅನುಮತಿ ನೀಡಿದೆ.
ಹಬ್ಬದ ಹಿನ್ನೆಲೆಯಲ್ಲಿ ಧಾರವಾಡದ ಮಾರುಕಟ್ಟೆಗಳು ಗುರುವಾರ ಜನಜಂಗುಳಿಯಿಂದ ಕೂಡಿದ್ದವು. ಹಬ್ಬಕ್ಕೆ ಹೂವು, ಹಣ್ಣು ಹಾಗೂ ಪಟಾಕಿ ಖರೀದಿಗಾಗಿ ಸಾರ್ವಜನಿಕರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಗಣಪತಿ ಮೂರ್ತಿಗಳ ಮಾರಾಟ ಕೂಡ ಜೋರಾಗಿ ನಡೆದಿತ್ತು. ಒಟ್ಟಾರೆಯಾಗಿ ಈ ವರ್ಷ ಗಣಪತಿ ಹಬ್ಬ ರಂಗು ಪಡೆದುಕೊಂಡಿದ್ದು, ನಾಳೆ ಮನೆ, ಮನೆಗೆ ಗಣಪತಿ ಆಗಮಿಸಲಿದ್ದು, ಅದಕ್ಕಾಗಿ ಗುರುವಾರವೇ ಸಾರ್ವಜನಿಕರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.
Kshetra Samachara
09/09/2021 09:25 pm